Thursday, May 22, 2014

ನನ್ನ ಹೆಸರು ಯಾರಿಗಾದರೂ ಇದೆಯಾ?

      ಮಾನವನಾಗಿ ಹುಟ್ಟಿದ ಮೇಲೆ ಅವನಿಗೊಂದು ಹೆಸರಿಡುವುದು ಒಂದು ಪದ್ಧತಿ.
ಹುಟ್ಟಿದ ಮಗು ಗಂಡು ಅಥವಾ ಹೆಣ್ಣಾದರೆ ಅವರಿಗೆ ಹುಟ್ಟಿದ ನಕ್ಷತ್ರದಲ್ಲಿ ಬರುವ ಕೋ,ಕಾ,ಲಾ,ಲೀ,ಪ ಇತ್ಯಾದಿ ಮೂಲ ಅಕ್ಷರಗಳಿಗೆ ಸರಿ ಹೊಂದುವಂತಹ ದೇವರ ಹೆಸರನ್ನು  ಇಡುವುದು ಮೊದಲಿನಿಂದಲೂ ರೂಢಿಯಲ್ಲಿ ಬಂದಿದೆ.ಆಮೇಲೆ ಪ್ರೀತಿಯಿಂದ ಕೃಷ್ಣನಿಗೆ -ಕಿಟ್ಟಿ,ಕುಟ್ಟು, ದತ್ತಾತ್ರೇಯನಿಗೆ - ದತ್ತು,ಪರಮೇಶ್ವರನಿಗೆ -ಪರಮ,ಪಮ್ಮೇಚ,ಸುಬ್ರಾಯ/ಸುಬ್ರಹ್ಮಣ್ಯನಿಗೆ -ಸುಬ್ಬ,ಸುಬ್ಬು,ಸುಬ್ಬಣ್ಣ,ಪಾರ್ವತಿಗೆ-ಪಾತಿ,ಪಾತು,ಸರಸ್ವತಿಗೆ ಸರು,ಸರಸು, ಮಾಲಿನಿ ಗೆ ಮಾಲಿ,ಮಾಲು,ಭಾಗೀರತಿ ಗೆ ಬಾಗಿ,ಬಾಗು,ಇತ್ಯಾದಿಯಾಗಿ ಚಿಕ್ಕದಾಗಿ ಕರೆಯುತ್ತಿದ್ದರು..ಇನ್ನೂ ಕೆಲವರು ಪ್ರೀತಿಯಿಂದ ಅಪ್ಪಿ,ಅಪ್ಪು,ಪುಟ್ಟ,ಪುಟ್ಟಿ,ಸಣ್ಣಿ,ಇತ್ಯಾದಿ ಕರೆಯುತ್ತಿದ್ದರು.
ಇತ್ತೀಚೆಗಂತೂ ಮಕ್ಕಳಿಗೆ ಇಡುವ ಹೆಸರಿಗೆ ಅರ್ಥವೇ ಇರುವುದಿಲ್ಲ.ಅಥವಾ ಕರೆಯಲು ಅಥವಾ ನೆನಪಿಡಲು ಬರದಂಥ ಹೆಸರುಗಳಿರುತ್ತವೆ..ಇಂಗ್ಲೀಶ್ ಶಬ್ದಗಳಿಂದ ತುಂಬಿರುವ ಡಾಲಿ,ಪಿಂಕಿ,ಡಿಂಕು ಎಂದು ಕರೆಯುವವರೇ   ಜಾಸ್ತಿ.(ಇದು ಇಲ್ಲಿ ಪ್ರಸ್ತುತವಲ್ಲ)
     ನಾ ಹುಟ್ಟಿದ ಮನೆ ಅವಿಭಕ್ತ ಕುಟುಂಬ.ಜೊತೆಗೆ ಸಂಪ್ರದಾಯದ ಪೌರೋಹಿತ್ಯ ಕುಟುಂಬ.ಎಲ್ಲಾ ವಯಸ್ಸಿನ ಮಕ್ಕಳಿರುವ ಈ ಕುಟುಂಬದಲ್ಲಿ ಗಂಡು-ಹೆಣ್ಣು ಮಕ್ಕಳಿಗೆಲ್ಲಾ ಇಟ್ಟಿದ್ದು ದೇವರ ಹೆಸರು..ಆದರೆ ಪ್ರೀತಿಯಿಂದ ಕೆಲವರಿಗೆ ಅಪ್ಪು,ಗುಮ್ಮೆ,ದತ್ತು ,ಅಪ್ಪಿ ,ಗಪ್ಪಿ ಎಂದೂ ಕರೆಯುವುದಿದೆ.
    ನಾನು ಹುಟ್ಟಿದಾಗ ನನ್ನ ನಕ್ಷತ್ರದ ಪ್ರಕಾರ ’ಲ ’ಕಾರದ ಹೆಸರು ಇಡಬೇಕೆಂದು ಲಕ್ಷ್ಮಿ ಅಂತ ಇಟ್ಟರಂತೆ.ಮೊದಲೇ ಹೇಳಿದಂತೆ ನಮ್ಮದು ಕೂಡು ಕುಟುಂಬವಾದ್ದರಿಂದ ನನ್ನ ಅಜ್ಜನ ತಮ್ಮನ ಹೆಂಡತಿ -ಸಣ್ಣಮ್ಮ- (ಈಗಲೂ ಗಟ್ಟಿ ಮುಟ್ಟಾಗಿರುವ ೯೦ ವರುಷದಾಕೆ)  ( ನಾವೆಲ್ಲ ಅಪ್ಪ ಕರೆಯುವಂತೆ ’ಚಿಕ್ಕಿ’ ಅಂತ ಕರೆಯೋದು..) ತನಗೆ ಹೆಣ್ಣು ಮಕ್ಕಳಿಲ್ಲವೆಂದು ನನ್ನನ್ನು ಎತ್ತಿ ಮುದ್ದಾಡುವುದು ಜಾಸ್ತಿಯಲ್ಲದೇ ಎಲ್ಲರಿಗಿಂತ ಹೆಚ್ಚಿಗೆ ಪ್ರೀತಿ ತೋರಿಸುತ್ತಿದ್ದಳಂತೆ..ಈಗಲೂ ಆ ಪ್ರೀತಿ ಕಮ್ಮಿಯಾಗಿಲ್ಲ.ಅವಳು ಆಗಿನ ಕಾಲದ ೫ ನೇಕ್ಲಾಸ್ ವರೆಗೆ ಕಲಿತಿದ್ದು .ನಾ ಹುಟ್ಟಿದಾಗ ಸ್ವಾತಂತ್ರ್ಯ ಸಿಕ್ಕು ಕೆಲವೇ ವರ್ಷಗಳಾದುದರಿಂದ ನನಗೆ ಪ್ರೀತಿಯಿಂದ ’ಝಾನ್ಸಿ ರಾಣಿ ಲಕ್ಷ್ಮಿಬಾಯಿ” ಎನ್ನುತ್ತಾ ಕರೆಯುತ್ತಿದ್ದಳಂತೆ.ಹಾಗೆಯೇ ಕರೆಯುತ್ತಾ ಅಷ್ಟು ಉದ್ದದ ಹೆಸರು ಹೇಳಿ  ಕರೆಯುವುದು ಕಷ್ಟ ಅಂತ ’ಜಾನ್ಸಿ’ ಅಂತ ಕರೆಯುತ್ತಿದ್ದರಂತೆ.
   ೬ ವರ್ಷವಾಗುತ್ತಲೇ ಕನ್ನಡ (ಪ್ರಾಥಮಿಕ ಶಾಲೆ) ಶಾಲೆಗೆ ಹೆಸರು ಹಚ್ಚಿದರೂ  ಛಳಿಗಾಲದಲ್ಲಿ ಛಳಿ,ಮಳೆಗಾಲದಲ್ಲಿ ಒದ್ದೆ,ಬೇಸಿಗೆಯಲ್ಲಿ ಸೆಕೆ ಅನ್ನುತ್ತಾ ನನ್ನತಾಯಿ  (ನಮಗೆಲ್ಲಾ)೪ ನೇ ಕ್ಲಾಸಿನವರೆಗೂ ಸರಿಯಾಗಿ ಶಾಲೆಗೆ ಕಳಿಸದಿದ್ದರೂ ತಾನೇ ತಕ್ಕಮಟ್ಟಿಗೆ ಮನೆಯಲ್ಲಿ ಕಲಿಸುತ್ತಿದ್ದಳು.ಶಾಲೆಯಲ್ಲಿರುವವರೆಲ್ಲಾ   ಒಳ್ಳೆಯ ಮಾಸ್ತರು,ಅಕ್ಕೋರು ಆದುದದರಿಂದ ಮತ್ತು ನಮ್ಮ ಮನೆಯ ಮೇಲಿನ ಅಭಿಮಾನ ಜೊತೆಗೆ ನಾವೆಲ್ಲಾ  ಜಾಣ ಮಕ್ಕಳಾದುದರಿಂದ ಕಲಿಸಿದುದನ್ನು ಬೇಗ ಕಲಿತು ಕ್ಲಾಸಿಗೆ ಮೊದಲಿಗರಾಗುತ್ತಿದ್ದೆವು.
    .ಆಗ ಶಾಲೆಯಲ್ಲಿಯೂ ನನ್ನನ್ನು ಎಲ್ಲರೂ ಜಾನ್ಸಿ ಅಂತಲೇ ಕರೆಯುತ್ತಿದ್ದರು.ಹಾಗಾಗಿ ಲಕ್ಷ್ಮಿ ಎಂಬ ಹೆಸರು ಹಾಜರಿ ಪುಸ್ತಕದಲ್ಲಿ ನಾಮಕಾವಸ್ತೆಗೆ ಮಾತ್ರ ಇತ್ತು..ಸಂಜೆ ಕನ್ನಡ ಶಾಲೆ ಬಿಟ್ಟು ಬರುವಾಗ ಹೈಸ್ಕೂಲಿಂದ  ಬರುವ ಮಕ್ಕಳು ಎದುರಿಗೆ ಸಿಗುತ್ತಿದ್ದರು..ಎಲ್ಲರೂ ಎದುರಲ್ಲಿರುವವರ ಹೆಸರನ್ನು ಪ್ರೀತಿಯಿಂದ ಹೇಳುವುದು ರೂಢಿಯಾಗಿತ್ತು.ಪ್ರತಿದಿನವೂ  ಇದು ಮಾಮೂಲಿಯಾಗಿತ್ತು..ಒಬ್ಬರಿಗೊಬ್ಬರು ಠೂ ಬಿಟ್ಟವರಿದ್ದರೆ ಅವರ ಹೆಸರನ್ನು ಕರೆಯುತ್ತಿರಲಿಲ್ಲ.  ಹೈಸ್ಕೂಲ್ ಲ್ಲಿ ನಮ್ಮೂರಿನವರೇ ಮಾಸ್ಟರ್ ರು ಜಾಸ್ತಿ ಇದ್ರು.ಅವ್ರು ಸೈಕಲ್ ಲ್ಲಿ ಬರ್ತಿದ್ರು.ನಾನು ಎದುರಿಗೆ ಸಿಕ್ಕಾಗ ಟಿ.ಎನ್ .ಭಾಗ್ವತ್ ಎನ್ನುವವರು ಪ್ರೀತಿಯಿಂದ ’ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ರಣ ಚಂಡಿ ಕೀ’ ಎನ್ನುತ್ತಿದ್ದರು, ಜೊತೆಗೆ ಉಳಿದವರು ಜೈ ಅನ್ನುತ್ತಿದ್ದದ್ದು ಇನ್ನೂ ಕಿವಿಯಲ್ಲಿ  ಮೊಳಗುತ್ತಿರುತ್ತದೆ.  ಈಗ ಆ  ಸವಿ ಘಳಿಗೆ ಕೇವಲ  ನೆನಪಷ್ಟೆ.ಅವರು ಸ್ವರ್ಗದಲ್ಲಿದ್ದು ಇದನ್ನು ಓದುತ್ತಿರಬೇಕು..!!.ಈಗಿನ ಮಕ್ಕಳಿಗೆ ನಡೆದು ಶಾಲೆಗೆ ಹೋಗುವ ಪ್ರಮೇಯವೇ    ಬರೋಲ್ಲ.ಆಟೊದಲ್ಲೊ,ಶಾಲಾ ವಾಹನದಲ್ಲಿ ಹೋಗುವವರು - ಅದರಲ್ಲೂ ಇಂಗ್ಲೀಷ್ ಮಾಧ್ಯಮದಲ್ಲಿ ಓದುವವರೇ ಜಾಸ್ತಿ..ನಾವೆಲ್ಲಾ ೮ ನೇ ವರ್ಗದಿಂದ    ಪಿ.ಯು.ಸಿ.೨ ನೇ ವರುಷದವರೆಗೂ ೩ ಮೈಲಿ ನಡೆದೇ  ಹೋಗಿ ಬರುತ್ತಿದ್ದೆವು ಕಾಲಿಗೆ ಚಪ್ಪಲಿಯೂ ಇಲ್ಲದೇ...!!

      ಹೈಸ್ಕೂಲಿಗೆ ಹೋದರೂ ಊರವರೇ ಮಾಸ್ತರು ಇದ್ದಿದ್ದರಿಂದ ನನ್ನ ಹೆಸರು ಎಲ್ಲರ ಬಾಯಲ್ಲೂ ಜಾನ್ಸಿ ಅಂತಲೇ  ಬರುತ್ತಿತ್ತು..ಲಕ್ಷ್ಮಿ ಅಂತ ಕರೆಯುವವರೇ ಇಲ್ಲವಾಗಿತ್ತು..
ಹಾಗೆಯೇ ಕಾಲೇಜಿಗೆ ಹೋದರೂ ಜೊತೆಯಲ್ಲಿ ಬಾಲ್ಯದ ಗೆಳತಿ ಇದ್ದುದರಿಂದ ನನಗೆ ಎಲ್ಲರೂ ಜಾನ್ಸಿ ಅಂತಲೇ ಕರೆಯುತ್ತಿದ್ದರು.ಒಬ್ಬಿಬ್ಬರು ಮಾತ್ರ ಲಕ್ಷ್ಮಿ ಅಂತ ಕರೆಯುತ್ತಿದ್ದರು.
ಮದುವೆಯಾಗುವ ಸಮಯ ದಲ್ಲಿ ಮಾತ್ರ ಒಮ್ಮೆ ಗಲಿಬಿಲಿಯಾಗಿದ್ದು ಈಗ ನಗು ಬರಿಸುತ್ತೆ..ಮುಹೂರ್ತ ಬೆಳಿಗ್ಗೆ ೮ ಗಂಟೆಗೆ ಇತ್ತು.ಮನೆಯಲ್ಲಿಯೇ ಮದುವೆ.ಛಳಿಗಾಲ ಬೇರೆ..ತಾಳಿ ಕಟ್ಟಿದ ಮೇಲೆ ಮಾಡುವ ಕ್ರಮಗಳಿಗೆ ಹೆಂಡತಿ ಕೈಯಲ್ಲಿ ನೀರು ಹಾಕಿಸುವುದು ಇದ್ದುದರಿಂದ ಪುರೋಹಿತರು ಲಕ್ಷ್ಮಿ ನೀರು ಹಾಕು ಅಂದರೂ ಅದೇನೊ ಲಕ್ಷ್ಮಿ ಅನ್ನೋದು ಮಂತ್ರದ ಭಾಗ ಅಂದುಕೊಂಡು ಸುಮ್ಮನೆ ಕೂತಿದ್ದರೆ ನಮ್ಮನೆಯವರು ಮೊಣಕೈಯಿಂದ ತಿವಿದು ಹೇಳುವಾಗ ಫ್ಲ್ಯಾಶ್ ಆಗುತ್ತಿತ್ತು..ಗಂಡನ ಮನೆಗೆ (ಸೋದರತ್ತೆಯ ಮನೆಯೂ ಹೌದು)  ಬಂದಾಗ ಅತ್ತಿಗೆ,ಮತ್ತಿತರರು   ನಾವಾದರೂ ಲಕ್ಷ್ಮಿ ಅಂತ ಕರೀತೇವೆ ಅಂತ ಒಮ್ಮೆ ಕರೆದರೂ ಎಲ್ಲರೂ ಜಾನ್ಸಿ ಅನ್ನೋವಾಗ  ಅವರ ಬಾಯಲ್ಲೂ ಜಾನ್ಸಿ ಅಂತ ಬರುತ್ತೆ..
ನನಗೆ ಹೊಸದಾಗಿ ಯಾರಾದ್ರೂ ಪರಿಚಯವಾದ್ರೆ ನನ್ನ ಹೆಸರು ’ಲಕ್ಷ್ಮಿ’ ಅಂದರೂ ಉಳಿದವರು ಜಾನ್ಸಿ ಅನ್ನೋವಾಗ .ನನ್ನನ್ನು ಯಾವ ರೀತಿ ಕರೆಯಬೇಕೆಂದು ಗೊತ್ತಾಗದೇ ಕೆಲವರು ಗಲಿಬಿಯಾಗುವುದೂ ಉಂಟು..
   ಒಮ್ಮೆಯಂತೂ ನನ್ನ ಮೈದುನನ ಮಗ ಊರ ದೇವಸ್ಥಾನದಲ್ಲಿ ಕೊಟ್ಟ ಪೂಜೆಯ ಪ್ರಸಾದ ತಗಂಡು ಬರಲು ಹೋದಾಗ ಲಕ್ಷ್ಮಿ ಭಟ್ಟ ಅನ್ನೊ ಹೆಸರಲ್ಲಿ ಪೂಜೆ ಇದೆ.ನಮ್ಮ ಮನೆಯವರ ಪೂಜೆ ಇಂದು ಇಲ್ಲ ಎಂದು ಬರಿಗೈಯಲ್ಲಿ ಬಂದುಬಿಟ್ಟ..ಆಗ ನಿನ್ನ ದೊಡ್ಡಮ್ಮನ ಹೆಸರು ಲಕ್ಷ್ಮಿ ಎಂದು ತಿಳಿ ಹೇಳಿದರೂ ನಂಬಲಿಲ್ಲ..
ಮಂಗಳೂರಿನಲ್ಲಿದ್ದಾಗ ನಮ್ಮೂರಿನ ಪರಿಚಿತರು ಬಂದಿದ್ದರು. ಇವತ್ತು ಜಾನ್ಸಿ ಮನೆಗೆ ಊಟಕ್ಕೆ ಕರೆದಿದ್ದಾರೆ ಅಂದರಂತೆ.ಅಯ್ಯೊ!!ಯಾವ ಕ್ರಿಶ್ಚನ್ನರ ಮನೆಗೆ ಊಟಕ್ಕೆ  ಕರೆದುಕೊಂಡು  ಹೋಗ್ತೀಯಾ ಅಂತ ಜೊತೆಲಿದ್ದವರು ಕೇಳಿದ್ದರಂತೆ..
ಕೆಲವರಂತೂ  'ಪುರೋಹಿತರ ಮನೆ ಕೂಸಾಗಿ ಕ್ರಿಶ್ಚನ್  ಹೆಸ್ರು ಯಾಕೆ ಇಟ್ಟುಕೊಂಡಿದ್ದೀಯಾ' ಅಂತ ಕೇಳುವುದೂ ಉಂಟು.

ಪ್ರೀತಿಯಿಂದ ವಿವಿಧ ರೀತಿಯಲ್ಲಿ ಕರೆಯುವ ಹೆಸರುಗಳಿದ್ದರೂ ಜಾನ್ಸಿ ಎಂದು ಕರೆಸಿಕೊಂಡವರು ಇಲ್ಲವೇ ಇಲ್ಲ ಅಂದುಕೊಂಡಿದ್ದೆ..ಆದರೆ ಯಾವುದೋ ಕನ್ನಡ ಧಾರಾವಾಹಿಯಲ್ಲಿ ’ಝಾನ್ಸಿ ಸುಬ್ಬಯ್ಯ ’ಎನ್ನೊ ನಟಿಯ ಹೆಸರು ಓದಿದ ನೆನಪು..ಆದರೂ ನನ್ನಂತೆ ಜಾನ್ಸಿ ಎಂದು ಕರೆಸಿಕೊಂಡಿಲ್ಲ ಎಂಬ ಹೆಮ್ಮೆ (ಗರಿಮೆ) ನನ್ನದು.. !!
೨-೩ ವರ್ಷಗಳ ಹಿಂದೆ ಫೇಸ್ ಬುಕ್ ಎಂಬ ಜಾಲದಲ್ಲಿ ಸೇರಿಕೊಳ್ಳುವಾಗ ಮೊದಲಿಗೆ ನನ್ನ ನಿಜ ನಾಮಧೇಯವನ್ನು ಹಾಕಿ,ನಂತರ ಕರೆಯುವ ಹೆಸರು, ನಂತರ ಮನೆಯ ಹೆಸರನ್ನು  ಸೇರಿಸಿ ಹಾಕಿಕೊಂಡಾಗ ಯಾಕೆ ಇಷ್ಟುದ್ದದ ಹೆಸರು,ಜಾನ್ಸಿ ಅಂತ ಯಾಕಿದೆ ಅಂತೆಲ್ಲಾ ಕೇಳಿದವರಿಗೆ ಪ್ರತ್ಯೇಕವಾಗಿ ಉತ್ತರಿಸುತ್ತಿದ್ದರೂ ಬ್ಲಾಗ್ ಲ್ಲಿ ಬರೆದು ಎಲ್ಲರ ಮುಂದೆ ಹಂಚಿಕೊಳ್ಳುವ ಇಚ್ಛೆಯಿಂದ ಇಲ್ಲಿ  ಬರೆದಿದ್ದನ್ನು ಸ್ವೀಕರಿಸುತ್ತೀರಷ್ಟೆ..?
ಪ್ರೀತಿಯಿಂದ ’ಜಾನ್ಸಿ’ಎಂದು ಕರೆದು,ನನ್ನನ್ನು ಎತ್ತಿ,ಮುದ್ದಾಡಿದ (ಸಣ್ಣಮ್ಮ) -ಚಿಕ್ಕಿಯೊಂದಿಗೆ ನನ್ನ ಭಾವಚಿತ್ರವನ್ನು  ಅವಳ ಮೊಮ್ಮಗನ ಮದುವೆಗೆ ಹೋದಾಗ ತೆಗೆಸಿಕೊಂಡಿದ್ದು ಇಲ್ಲಿದೆ...
Sunday, March 17, 2013

ಶುದ್ಧ ಕುಂಕುಮ ತಯಾರಿಸುವ ವಿಧಾನ                ನಮ್ಮ ಹಿಂದೂ  ಸಂಸ್ಕೃತಿಯಲ್ಲಿ  ಅರಿಸಿನ ಮತ್ತು ಕುಂಕುಮಕ್ಕೆ ಮಹತ್ವವಿರುವ ಸಂಗತಿ ಎಲ್ಲರಿಗೂ ಗೊತ್ತಿದೆ..ಪೂಜೆ -ಪುನಸ್ಕಾರಗಳಲ್ಲಿ, ಸ್ತ್ರೀಯರ ಹಣೆಯಲ್ಲಿ ,ದೇವಸ್ಥಾನಗಳಲ್ಲಿ,ಹಾಗೂ ವೈದಿಕ ಸಂಸ್ಕಾರಗಳು ಇತ್ಯಾದಿ ಎಲ್ಲ ಕಡೆಗಳಲ್ಲಿ ಕುಂಕುಮಕ್ಕೆ  ಪ್ರಾಶಸ್ತ್ಯವಿದೆ..ಇಂದು    ಕಲಬೆರಕೆ ಹಾಗೂ ರಾಸಾಯನಿಕಯುಕ್ತ ಕುಂಕುಮವನ್ನು ಎಲ್ಲೆಡೆ ಕಾಣುತ್ತೇವೆ..ಇದರಿಂದ ದಿನ ನಿತ್ಯ ಹಚ್ಚಿಕೊಳ್ಳುವ ಕುಂಕುಮದ ಪರಿಶುದ್ದತೆ ಕಡಿಮೆಯಾಗಿ ನಾನಾ ವಿಧದ ಸೋಂಕುಗಳಿಗೆ   ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ..

ಕುಂಕುಮವನ್ನು ತಯಾರಿಸುವ ಕುರಿತು ಅನೇಕ ಅಭಿಪ್ರಾಯಗಳಿದ್ದು ,ಆಧುನಿಕ ಕಾಲದಲ್ಲಿ ಅರಿಸಿನಕ್ಕೆ ಸುಣ್ಣ ಸೇರಿಸುವುದರ ಮೂಲಕ ಅಥವಾ ಮತ್ಯಾವುದೋ ದ್ರವ್ಯ ಸೇರಿಸುವ ಮೂಲಕ ಕೆಂಪು ಬಣ್ಣದ ಪದಾರ್ಥ ಹೊಂದುವುದನ್ನು  ಅನುಸರಿಸದೇ ವಿನೂತನ ಪದ್ಧತಿ ಹಾಗೂ ಔಷಧದ ಅಂಶವಾಗಿ ಕುಂಕುಮ ಸಿದ್ಧವೆನ್ನುವ ವಿಧಾನವನ್ನು ಸಂಶೋಧಿಸಿದವರಲ್ಲಿ ತಮಿಳುನಾಡಿನ ಶ್ರೀಮತಿ ರಾಜಮ್ಮ ಕೃಷ್ಣಮೂರ್ತಿ ಹಾಗೂ ಶಿವಮೊಗ್ಗದ ಶ್ರೀ ಆನಂದ ಆ.ಶ್ರೀ.ಮುಂತಾದವರು ಪ್ರಮುಖರು.ಶ್ರೀ ರಾಮಚಂದ್ರಾಪುರ ಮಠದ ಪ.ಪೂ.ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಆಶೀರ್ವಾದದಿಂದ ಸಾವಯವ ಕೃಷಿ ಪರಿವಾರದ ಮುಖ್ಯಸ್ಥರಾದ ಶ್ರೀ ಆನಂದ ಅವರು ರಾಜ್ಯದ ವಿವಿಧೆಡೆಗಳಲ್ಲಿ ಕುಂಕುಮದ ಪ್ರಾತ್ಯಕ್ಷಿಕೆಯನ್ನು ಮಾಡಿ ಮಾರ್ಗದರ್ಶಕರಾಗಿದ್ದಾರೆ..ಅವರ ಮಾರ್ಗದರ್ಶನ ಅನುಸರಿಸಿ ಧರ್ಮ-ಸಂಸ್ಕೃತಿ ಪ್ರತಿಷ್ಠಾನವು ಆ ಪರಂಪರೆಯನ್ನು ಮುಂದುವರಿಸುತ್ತಿದೆ.

 ಈ ಕೆಳಗೆ ತಿಳಿಸಿದ ವಿಧಾನದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗಾನುಸಾರದಲ್ಲಿ ಜರುಗಿದ  ಕೋಟಿ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡ ಮಹಿಳೆಯರಾದಿಯಾಗಿ ಎಲ್ಲರೂ ಶುದ್ಧ ಕುಂಕುಮ ತಯಾರಿಸಿ ಅಥವಾ ಆ ವಿಧಾನದಲ್ಲಿ ತಯಾರಿಸಿದ ಕುಂಕುಮ ಕೊಂಡುಕುಂಕುಮಾರ್ಚ ಲಲಿತಾಸಹಸ್ರನಾಮ ಕುಂಕುಮಾರ್ಚನೆಯನ್ನು ಕೈಗೊಂಡು   ಶ್ರೀ ಗುರುಗಳ ಹಾಗೂ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಈಗಲೂ  ತಮಗೆ ಬೇಕಾದ ಕುಂಕುಮವನ್ನು ತಾವೇ ತಯಾರಿಸಿಕೊಳ್ಳುವುದನ್ನು ನಾವು ಕಾಣಬಹುದಾಗಿದೆ..

ಹಾಗಾಗಿ ಪರಿಶುದ್ಧ ಕುಂಕುಮವನ್ನು ನಾವೇ ತಯಾರಿಸಿಕೊಂಡರೆ ಎಷ್ಟು    ಚೆನ್ನ ಅಲ್ಲವೇ...

ಅರ್ಧ ಕಿಲೊ ಕುಂಕುಮ ತಯಾರಿಕೆಗೆ ಬೇಕಾಗುವ ವಸ್ತುಗಳು.

೧.ಅರಿಸಿನ ಬೇರು  ೧/೨ ಕಿಲೊ (ಕಡಲೆ ಕಾಳಿನಷ್ಟು ಗಾತ್ರದಲ್ಲಿ  ಕತ್ತರಿಸಿದ್ದು)
೨.ಬಿಳಿಗಾರ ೭೫ ಗ್ರಾಮ್ (ಹಪ್ಪಳದ ಖಾರ ಅಲ್ಲ)  (ಹಿಟ್ಟು ಮಾಡಿದ್ದು)
೩.ಪಟಕ (ಸ್ಫಟಿಕ) ೫ ಗ್ರಾಮ್ (ಹಿಟ್ಟು ಮಾಡಿದ್ದು)
೪.ಲಿಂಬೆರಸ ೩೫೦ ಮಿ.ಲೀ. (ಸುಮಾರು ೩೫ ರಿಂದ ೪೦ ಲಿಂಬೆ ಹಣ್ಣುಗಳಿಂದ ತಯಾರಿಸಿದ ಕುಸುಮ ಮತ್ತು ಬೀಜ ರಹಿತ)
೫.ಶುದ್ಧ ಆಕಳ ತುಪ್ಪ    ೫೦ಗ್ರಾಮ್ (ಕರಗಿದ ಆದರೆ ಉಷ್ಣವಾಗಿರದ )

ವಿಧಾನ:- ಅದೇ ದಿನ ತಯಾರಿಸಿದ ಲಿಂಬೆ ರಸದಲ್ಲಿ ಬೆಳಿಗ್ಗೆ ೮ ಗಂಟೆಗೆ ಸ್ಫಟಿಕ ಹಾಗೂ ಬಿಳಿಗಾರವನ್ನು ಮಿಶ್ರ ಮಾಡಿ.ಅದು ಕರಗಿದ ಮೇಲೆ ಅರಿಸಿನ ತುಣುಕುಗಳನ್ನು ಬೆರೆಸಿ.ಸುಮಾರು ೨ ತಾಸುಗಳವರೆಗೆ ನಿಯತವಾಗಿ ಕಲಸುತ್ತಿರಬೇಕು. ಸಂಜೆ ೫ ಗಂಟೆಗೆ ರಸ ಹೀರಿಕೊಂಡ ಅರಿಸಿನ ತುಣುಕುಗಳನ್ನು ಮುತ್ತುಗದ ಎಲೆ ಅಥವಾ ಬಾಳೆ ಎಲೆಯ ಮೇಲೆ ಬಿಡಿ ಬಿಡಿಯಾಗಿ ಹರಡಬೇಕು.ಪ್ರತಿದಿನ ಒಮ್ಮೆ  ಎಲೆಯ ಮೇಲಿರುವ ಅರಿಸಿನ ಕಣಗಳನ್ನು ಕೈಯಾಡಿಸುತ್ತಿರಬೇಕು. ಯಾವುದೇ ಕಾರಣಕ್ಕೂ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬಾರದು..ನೆರಳಿನಲ್ಲಿ ಒಣಗಿಸಿದಾಗ ಮಾತ್ರ ಕುಂಕುಮಕ್ಕೆ  ಸರಿಯಾದ ಕೆಂಪು ಬಣ್ಣ ಬರುತ್ತದೆ.
ಎಂಟು ದಿನಗಳ ನಂತರ ಅದನ್ನು ಸಣ್ಣದಾಗಿ ಕುಟ್ಟಬೇಕು. ಅನಂತರ ಪುಡಿಯನ್ನು ಜರಡಿ ಹಿಡಿದು ಅಥವಾ ವಸ್ತ್ರದಲ್ಲಿ ಸೋಸಿ ಅತಿ ನುಣುಪಾದ ಕುಂಕುಮವನ್ನು  ಬೇರ್ಪಡಿಸಿಕೊಳ್ಳಿ. ಅದಕ್ಕೆ ೫೦ ಗ್ರಾಮ್ ಕರಗಿದ ಆಕಳ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲೆಸಿದರೆ ಅರ್ಧ ಕಿಲೊ ಕೆಂಪಾದ ,ಸುವಾಸನಾಭರಿತ ಶುದ್ಧ ಕುಂಕುಮ ತಯಾರಾಗುತ್ತದೆ..

ಕುಂಕುಮ ತಯಾರಿಕೆಯ ಶಾಸ್ತ್ರೀಯ ದಿನ 
ಫಾಲ್ಗುಣ ಮಾಸ ,ಶುಕ್ಲಪಕ್ಷ ,ಏಕಾದಶೀ (ಮಾರ್ಚ ತಿಂಗಳು)

ಕೃಪೆ :ಧರ್ಮ-ಸಂಸ್ಕೃತಿ ಪ್ರತಿಷ್ಠಾನಮ್  ರವರ ಕುಂಕುಮಾರ್ಚನೆ ಪುಸ್ತಕ..

Saturday, July 30, 2011

   
                                       
                                                ಕೊಬ್ಬರಿ ಹೋಳಿಗೆ
              


ಬೇಕಾಗುವ  ಸಾಮಗ್ರಿ :  ಕೊಬ್ಬರಿ  ತುರಿ  ೧ ಕಪ್,ಸಕ್ಕರೆ ೧  ಕಪ್, ಏಲಕ್ಕಿ  ಸ್ವಲ್ಪ, ಮೈದಾ ಹಿಟ್ಟು ಮುಕ್ಕಾಲು ಕಪ್.ಸ್ವಲ್ಪ ಉಪ್ಪು,ಎಣ್ಣೆ..ಸ್ವಲ್ಪ  ಹಾಲು...ಅರಿಸಿನ ಪುಡಿ ಸ್ವಲ್ಪ

ಮಾಡುವ ವಿಧಾನ: ಕೊಬ್ಬರಿ  ಯನ್ನು  ಸಣ್ಣಗೆ  ಕತ್ತರಿಸಿ  ಮಿಕ್ಸಿಯಲ್ಲಿ  ಪುಡಿ ಮಾಡಿಕೊಳ್ಳಿ.ಜೊತೆಗೆ ಸಕ್ಕರೆ ,ಏಲಕ್ಕಿಯನ್ನೂ  ಪುಡಿ  ಮಾಡಿ..ನ೦ತರ  ಆ  ಮಿಶ್ರಣಕ್ಕೆ  ಉ೦ಡೆ ಕಟ್ಟುವ ಹದಕ್ಕೆ  ಹಾಲು  ಹಾಕಿ  ಉ೦ಡೆ  ಮಾಡಿಟ್ಟುಕೊಳ್ಳಿ..ಇನ್ನೊ೦ದು  ಪಾತ್ರೆಯಲ್ಲಿ  ಉಪ್ಪು,ನೀರು ,ಅರಿಸಿನ ಪುಡಿ , ಎಣ್ಣೆ ಹಾಕಿ  ಮೈದಾ  ಸೇರಿಸಿ  ಹೋಳಿಗೆ  ಕಣಕದ ಹದಕ್ಕೆ  ಕಲೆಸಿ  ೧೦  ನಿಮಿಷ  ನೆನೆಯಲು ಬಿಡಿ.  ನ೦ತರ  ಕಣಕದ  ಉ೦ಡೆ  ಮಾಡಿ  ಅ೦ಗೈಲ್ಲಿ  ತಟ್ಟಿ ಅದರ  ಒಳಗಡೆ ಕೊಬ್ಬರಿ  ಉ೦ಡೆ ಇಟ್ಟು  ಎಲ್ಲಾ ಕಡೆ  ಮುಚ್ಚಿ  ಮೈದಾಹಿಟ್ಟಿನಲ್ಲಿ  ಅದ್ದಿ  ಲಟ್ಟಿಸಿ .


ನ೦ತರ  ಕಾವಲಿಯಲ್ಲಿ  ಬೇಯಿಸಿ  ತೆಗೆದರೆ ಘಮಘಮಿಸುವ ಕೊಬ್ಬರಿ  ಹೋಳಿಗೆ  ತಿನ್ನಲು  ರೆಡಿ...ಈ ಹೋಳಿಗೆ ೧ ವಾರದವರೆಗೂ  ಹಾಳಾಗುವುದಿಲ್ಲ...Friday, July 29, 2011

ಸುಲಭದಲ್ಲಿ ಸಿಗುವ ಸೊಪ್ಪಿನ ಸುಲಭದ ಅಡಿಗೆ.....ಮಳೆಗಾಲ  ಬ೦ತೆ೦ದರೆ   ಗಿಡಗಳು  ಚಿಗುರಲು  ಪ್ರಾರ೦ಭಿಸಿ  ,ಹಳ್ಳಿಯಲ್ಲಿಯ  ಜನರು  ಹಿತ್ತಲಲ್ಲಿ  ದಿನದ  ಅಡುಗೆಗೆ  ಬೇಕಾದ  ಸುಲಭದಲ್ಲಿ  ಸಿಗುವ  ಆರೋಗ್ಯಕರ  ಸೊಪ್ಪುಗಳನ್ನು  ಆಯ್ದು ತ೦ದು ಅದರಿ೦ದ  ವಿವಿಧ ಬಗೆಯ  ಪದಾರ್ಥಗಳನ್ನು  ತಯಾರಿಸುತ್ತಾರೆ..ನಗರಗಳಲ್ಲಿರುವವರೂ   ಅ೦ತಹ ಸೊಪ್ಪಿನ ಗಿಡಗಳನ್ನು ಕು೦ಡಗಳಲ್ಲಿ  ಅಥವಾ  ಕೈತೋಟದಲ್ಲಿ ಬೆಳೆಸಿಕೊಳ್ಳಬಹುದು...ಅವುಗಳೆ೦ದರೆ  ಹೊನಗೊನೆ ಸೊಪ್ಪು, ಬಸಳೆ ಸೊಪ್ಪು, ನೆಲ ಬಸಳೆ ,ಕೆಸುವಿನ ಸೊಪ್ಪು ,ತಗಟೆ ಸೊಪ್ಪು ,ಪುನರ್ನವ  ಸೊಪ್ಪು....ಹೀಗೆ  ತು೦ಬಾ ಇವೆ...

ಈಗ  ಹೊನಗೊನೆ  ಸೊಪ್ಪಿನ   ಪಲ್ಯ  ಮಾಡೋಣ...

                                                  ಹೊನಗೊನೆ  ಪಲ್ಯ
ಬೇಕಾಗುವ  ಸಾಮಗ್ರಿ :  ೨ ದೊಡ್ಡ ಕಪ್  ಹೆಚ್ಚಿದ  ಹೊನಗೊನೆ ಸೊಪ್ಪು  ,  ಕಾಯಿತುರಿ , ಉಪ್ಪು,  ೨-೩ ಹಸಿಮೆಣಸು ,೧ ಉಳ್ಳಾಗಡ್ಡೆ ,   ಒಗ್ಗರಣೆಗೆ  ಎಣ್ಣೆ ,ಉದ್ದಿನ ಬೇಳೆ , ಸಾಸಿವೆ...
ಮಾಡುವ ವಿಧಾನ :  ಬಾಣಲೆಯಲ್ಲಿ  ಉದ್ದಿನ ಬೇಳೆ  ,ಸಾಸಿವೆ,  ಹಸಿಮೆಣಸು  ಹಾಕಿ  ಒಗ್ಗರಣೆ  ತಯಾರಿಸಿಕೊ೦ಡು  ಹೆಚ್ಚಿದ  ಉಳ್ಳಾಗಡ್ಡೆ, ಹಾಕಿ..ನ೦ತರ  ಸ್ವಲ್ಪ ಹೊ೦ಬಣ್ಣ  ಬ೦ದಾಗ  ಹೆಚ್ಚಿದ  ಸೊಪ್ಪು  ಹಾಕಿ  ಕೈಯಾಡಿಸಿ..ನ೦ತರ ಕಾಯಿತುರಿ ,ರುಚಿಗೆ ತಕ್ಕಷ್ಟು  ಉಪ್ಪು  ಹಾಕಿ  ಬೇಯಿಸಿ..  ಸೊಪ್ಪು  ಬೆ೦ದ  ಮೇಲೆ ಕೆಳಗಿಳಿಸಿ...ಈ ಪಲ್ಯವು  ರೊಟ್ಟಿ , ಚಪಾತಿ  ಅಥವಾ  ಅನ್ನದೊ೦ದಿಗೆ   ತಿನ್ನಬಹುದು...
ಹೊನಗೊನೆ ಸೊಪ್ಪು  ಕಣ್ಣುಗಳ  ಆರೋಗ್ಯಕ್ಕೆ ಒಳ್ಳೆಯದು.


       ಎಲವರಿಗೆ  ಸೊಪ್ಪಿನ ತ೦ಬುಳಿ
ಬೇಕಾಗುವ  ಸಾಮಗ್ರಿ :  ಏಳೆ೦ಟು ಎಸಳು  ಎಲವರಿಗೆ  ಸೊಪ್ಪು ,ಹುರಿಯಲು  ಸ್ವಲ್ಪ ತುಪ್ಪ ,೧ ಚಮಚ  ಜೀರಿಗೆ , ೨-೩  ಕಾಳು ಮೆಣಸು , ಕಾಯಿತುರಿ ೧/೨  ಕಪ್ ,ಉಪ್ಪು, ೧/೨ ಲೋಟ  ಹುಳಿ ಮಜ್ಜಿಗೆ...
ಮಾಡುವ ವಿಧಾನ :ಬಾಣಲೆಗೆ  ೧ ಚಮಚ  ತುಪ್ಪ  ಹಾಕಿ. ಎಸಳಿನಿ೦ದ  ಬಿಡಿಸಿದ  ಎಲವರಿಗೆ ಸೊಪ್ಪು, ಜೀರಿಗೆ ,ಕಾಳುಮೆಣಸು ಎಲ್ಲವನ್ನು ಹಾಕಿ  ಸ್ವಲ್ಪ ಹುರಿಯಿರಿ...ನ೦ತರ  ಕಾಯಿತುರಿಯೊ೦ದಿಗೆ  ಹುರಿದ  ಸಾಮಗ್ರಿ ಹಾಕಿ  ನುಣ್ಣಗೆ  ರುಬ್ಬಿ...  ತೆಳ್ಳಗೆ  ಇರಬೇಕೆನ್ನುವವರು  ನೀರು  ಸೇರಿಸಿ,  ತಕ್ಕಷ್ಟು  ಉಪ್ಪು  ಹಾಕಿ  ಸ್ವಲ್ಪ  ಬಿಸಿ  ಮಾಡಿ  , ಕೆಳಗಿಳಿಸಿದ  ಮೇಲೆ  ಮಜ್ಜಿಗೆ  ಬೆರೆಸಿದರೆ   ಮಳೆಗಾಲದಲ್ಲಿ  ಬಿಸಿ -ಬಿಸಿ ತ೦ಬುಳಿ  ಬಿಸಿ  ಅನ್ನದೊ೦ದಿಗೆ  ರುಚಿ.ಎಲವರಿಗೆ  ಸೊಪ್ಪು  ಬ್ಲಡ್ ಪ್ರೆಶರ್   ಇರುವವರಿಗೆ  ಒಳ್ಳೆಯದು..ಬೇಸಿಗೆಯಲ್ಲಿ  ತ೦ಬುಳಿಯನ್ನು  ಬಿಸಿ ಮಾಡದೆ  ಹಾಗೆಯೆ  ಊಟಕ್ಕೆ ಅಥವಾ (ತ೦ಪಾಗಿ ) ಕುಡಿಯಲು  ಬಳಸಬಹುದು..
ಹೀಗೆಯೆ   ಸ೦ಬಾರ  ಸೊಪ್ಪು  (ದೊಡ್ಡ ಪತ್ರೆ)     ಅಥವಾ  ಬಸಳೆ ಸೊಪ್ಪಿನಿ೦ದಲೂ  ತ೦ಬುಳಿ  ಮಾಡಿ  ಸೇವಿಸಿದರೆ  ಆರೋಗ್ಯಕ್ಕೆ  ಒಳ್ಳೆಯದು..

           ಬಸಳೆ  ಸೊಪ್ಪಿನ  ಕರಗಲಿ..

                                                                           
                                                  
ಬೇಕಾಗುವ  ಸಾಮಗ್ರಿ :
ಹೆಚ್ಚಿದ  ಬಸಳೆ ಸೊಪ್ಪು (ಎಳೆಯದಾದ  ದ೦ಟನ್ನೂ  ಹಾಕಬಹುದು)  ೨ ದೊಡ್ಡ  ಕಪ್ ,೮-೧೦ ಎಸಳು ಬೆಳ್ಳುಳ್ಳಿ, ೨-೩  ಹಸಿಮೆಣಸು , ಸ್ವಲ್ಪ  ಹುಣಿಸೆ ರಸ ,ಸ್ವಲ್ಪ  ಕಾಯಿ ತುರಿ, ಉಪ್ಪು, ಸ್ವಲ್ಪ  ಬೆಲ್ಲ...
ಮಾಡುವ ವಿಧಾನ :- ಹೆಚ್ಚಿದ ಬಸಳೆಸೊಪ್ಪು ,ಬೆಳ್ಳುಳ್ಳಿ, ಹೆಚ್ಚಿದ ಹಸಿಮೆಣಸು ,ಕಾಯಿತುರಿ , ಉಪ್ಪು , ಹುಣಿಸೆ ರಸ ,ಬೇಕಿದ್ದರೆ ಬೆಲ್ಲ  ಎಲ್ಲವನ್ನು  ಒಟ್ಟಿಗೆ  ಹಾಕಿ  ಚೆನ್ನಾಗಿ  ಬೇಯಿಸಿದರೆ  ಬಸಳೆ ಸೊಪ್ಪಿನ  ಕರಗಲಿಯು  ಅನ್ನ , ಅಥವಾ  ಚಪಾತಿಯೊ೦ದಿಗೆ  ತಿನ್ನಲು ಸಿದ್ಧ...
ಇದು  ಬಲು ಬೇಗ   ಮಾಡಬಹುದಾದ  ಆರೋಗ್ಯಕರ   ವ್ಯ೦ಜನ.......
ಹೀಗೆಯೆ  ಕೆಸುವಿನ  ಸೊಪ್ಪಿನಿ೦ದಲೂ  ತಯಾರಿಸಬಹುದು..


 ಪುನರ್ನವ  ಸೊಪ್ಪಿನ ಹುಳಿ  (ಸಾ೦ಬಾರು) ಬೇಕಾಗುವ  ಸಾಮಗ್ರಿ:೧  ದೊಡ್ಡ  ಬಟ್ಟಲು ಹಚ್ಚಿದ  ಪುನರ್ನವ  ಸೊಪ್ಪು , ನೆನೆಸಿದ  ಯಾವುದೇ ಕಾಳು (ಅಲಸ೦ದೆ ,ಹೆಸರು  ಕಾಳು , ವಟಾಣಿ ) ೧/೨  ಬಟ್ಟಲು , ಕಾಯಿತುರಿ ೧ ಬಟ್ಟಲು, ಮಸಾಲೆಗೆ ೨ ಚಮಚ  ಕೊತ್ತ೦ಬರಿ ,೧/೨  ಚಮಚ ಜೀರಿಗೆ, ೧/೪  ಚಮಚ ಮೆ೦ತೆ  , ೧/೪ ಚಮಚ  ಸಾಸಿವೆ  ,೨-೩  ಬೆಳ್ಳುಳ್ಳಿ,  ಒಣಮೆಣಸು  ೭-೮ ,ಸ್ವಲ್ಪ ಹುಣಿಸೆ ಹಣ್ಣು , ರುಚಿಗೆ ತಕ್ಕಷ್ಟು ಉಪ್ಪು , ಬೇಕಿದ್ದರೆ ಬೆಲ್ಲ ....
 ವಿಧಾನ :  ಮೊದಲು ನೆನೆದ ಕಾಳನ್ನು ಕುಕ್ಕರ್ ಗೆ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ..ನ೦ತರ  ಸೊಪ್ಪು  ಹಾಕಿ ಬೇಯಿಸಿಕೊಳ್ಳಿ.ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕೊತ್ತ೦ಬರಿ ,ಸಾಸಿವೆ ,ಮೆ೦ತೆ , ಜೀರಿಗೆ ,ಒಣಮೆಣಸು , ಬೆಳ್ಳುಳ್ಳಿ ಹಾಕಿ  ಒಣಮೆಣಸಿನೊ೦ದಿಗೆ   ಹುರಿದುಕೊಳ್ಳಿ.ಆಮೇಲೆ  ಕಾಯಿತುರಿಗೆ ಹುಣಿಸೆ ಹಣ್ಣು ,ಹುರಿದ ಮಸಾಲೆ ಹಾಕಿ ರುಬ್ಬಿ.ಬೇಯಿಸಿದ  ಸೊಪ್ಪಿಗೆ  ರುಬ್ಬಿದ್ದನ್ನು  ಹಾಕಿ ತಕ್ಕಷ್ಟು  ನೀರು ಬೆರೆಸಿ..ರುಚಿಗೆ ಬೇಕಾದಷ್ಟು  ಉಪ್ಪು  ಹಾಕಿ  ಚೆನ್ನಾಗಿ ಕುದಿಸಿ..ಈಗ  ಆರೋಗ್ಯಕರ ಘಮ-ಘಮ ಪುನರ್ನವ ಹುಳಿ ಅನ್ನ ಅಥವಾ ಚಪಾತಿಯೊಡನೆ ಸವಿಯಲು ಸಿದ್ಧ.


                               ಶ್ರೀಮತಿ  ಲಕ್ಷ್ಮಿ  ಜಗದೀಶ ಭಟ್ಟ ,ಮ೦ಗಳೂರು....

M T R ಅಡುಗೆ..


                                                  ಸ್ವೀಟ್  ಕೊರ್ನ್   ಲಕೋಟೆ  

ಬೇಕಾಗುವ  ಸಾಮಗ್ರಿ:  ಒ೦ದು  ಲೋಟ  ಸ್ವೀಟ್ ಕೊರ್ನ್  ,ಒ೦ದು ಚಮಚ  ಧನಿಯಾ ಪುಡಿ,ಒ೦ದು ಚಮಚ ಜೀರಿಗೆ ಪುಡಿ,  ಒ೦ದು ಚಮಚ  ಮೆಣಸಿನ ಪುಡಿ, ಸ್ವಲ್ಪ ಬೆಣ್ಣೆ ,  ಸ್ವಲ್ಪ ಉಪ್ಪು.ಒ೦ದು ಲೋಟ ಮೈದಾ,ಸ್ವಲ್ಪ  ತುಪ್ಪ, ಉಪ್ಪು..ಕರಿಯಲು ಎಣ್ಣೆ..

ಮಾಡುವ ವಿಧಾನ:  ಸ್ವೀಟ್  ಕೊರ್ನ್ ನ್ನು  ಸ್ವಲ್ಪ  ಜಜ್ಜಿ  ಇಟ್ಟುಕೊಳ್ಳಿ.ಬಾಣಲೆಯಲ್ಲಿ ಬೆಣ್ಣೆ ಹಾಕಿ  ,ಧನಿಯಾ ಪುಡಿ,ಜೀರಿಗೆ ಪುಡಿ ,ಮೆಣಸಿನ ಪುಡಿ ಹಾಅಕಿ  ..ತಕ್ಷಣ  ಜಜ್ಜಿದ ಸ್ವೀಟ್ ಕೊರ್ನ್ ಹಾಕಿ,ತಕ್ಕಷ್ಟು ಉಪ್ಪು  ಹಾಕಿ  ಕೈಯಾಡಿಸಿ  ಇಳಿಸಿ..ನ೦ತರ  ಮೈದಾಕ್ಕೆ ಸ್ವಲ್ಪ ಉಪ್ಪು,ತುಪ್ಪ  ಹಾಕಿ  ಪುರಿ  ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ,.ಚಿಕ್ಕ ಉ೦ಡೆ ಮಾಡಿ  ಪುರಿಯ೦ತೆ ಲಟ್ಟಿಸಿ  ಅದರ  ಒಳಗಡೆ  ತಯಾರಿಸಿದ  ಮಸಾಲೆ  ಹಾಕಿ  ನಾಲ್ಕೂ  ಮೂಲೆಗಳನ್ನು  ಲಕೋಟೆಯ೦ತೆ  ಮಡಿಸಿ  ಎಣ್ಣೆಯಲ್ಲಿ ಕರಿದರೆ  ಪೌಷ್ಟಿಕವಾದ ,ಆಕರ್ಷಕ  ಸ್ವೀಟ್ ಕೊರ್ನ್  ಲಕೋಟೆ  ತಿನ್ನಲು  ಸಿದ್ಧ...ಸ್ವೀಟ್  ಕೊರ್ನ್  ರುಚಿ ಇದ್ದ೦ತೆ ಇರಲು  ಬೇರೆ ಯಾವ ಮಸಾಲೆಯನ್ನೂ ಹಾಕಬಾರದು...ಜಜ್ಜಿ  ಹಾಕುವದರಿ೦ದ  ಒಳಗಡೆ ಬೇಗ ಬೆ೦ದಿರುತ್ತದೆ...ತಿನ್ನಲು ಬಲು ರುಚಿ..


                                           ಬಸಳೆ  ದ೦ಟಿನ ಪಳದ್ಯ
ಬೇಕಾಗುವ  ಸಾಮಗ್ರಿ : ೨ಇ೦ಚು  ಉದ್ದಕ್ಕೆ ಕತ್ತರಿಸಿದ ಬಸಳೆ  ದ೦ಟು ಅರ್ಧ ಲೋಟ, ಒ೦ದು ಲೋಟ ಕಾಯಿತುರಿ, ಒ೦ದು ಚಮಚ  ಧನಿಯಾ ಪುಡಿ,ಒ೦ದು ಚಮಚ ಜೀರಿಗೆ ಪುಡಿ,ಅರ್ಧ  ಚಮಚ  ಅರಿಸಿನ ಪುಡಿ, ೧ ಹಸಿಮೆಣಸು,ಉಪ್ಪು,ಸ್ವಲ್ಪ ಬೆಲ್ಲ, ಅರ್ಧ ಲೋಟ ಮಜ್ಜಿಗೆ.ಒಗ್ಗರಣೆಗೆ :ಜೀರಿಗೆ,ಒಣಮೆಣಸಿನ ಕಾಯಿ, ತುಪ್ಪ.
ಮಾಡುವ  ವಿಧಾನ : ಪಾತ್ರೆಯಲ್ಲಿ  ಕತ್ತರಿಸಿದ  ಬಸಳೆ ದ೦ಟು ಉಪ್ಪು, ಬೆಲ್ಲ ನೀರು ಹಾಕಿ  ಬೇಯಿಸಿಕೊಳ್ಳಿ.ಕಾಯಿತುರಿಗೆ  ಧನಿಯಾ ಪುಡಿ,ಜೀರಿಗೆ ಪುಡಿ, ಅರಿಸಿನ ,ಹಸಿಮೆಣಸು  ಹಾಕಿ  ನುಣ್ಣಗೆ  ರುಬ್ಬಿ  ಬೇಯುತ್ತಿರುವ  ಪಾತ್ರೆಗೆ   ಹಾಕಿ..ದಪ್ಪವೆನಿದರೆ ನೀರು  ಬೆರೆಸಿ  ಕುದಿ ಬರುವ  ಹೊತ್ತಿಗೆ  ಒಲೆಯಿ೦ದ  ಇಳಿಸಿ  ಮಜ್ಜಿಗೆ  ಹಾಕಿ...ನ೦ತರ  ತುಪ್ಪ  ಹಾಕಿ  ಜೀರಿಗೆ  ಒಣಮೆನಸಿನ ಚೂರು  ಹಾಕಿ  ಒಗ್ಗರಣೆ  ಹಾಕಿದರೆ  ಬಸಳೆ ದ೦ಟಿನ ಪಳದ್ಯ  ಈ  ಮಳೆಗಾಲದಲ್ಲಿ  ಬಿಸಿ ಅನ್ನದೊಡನೆ ಬಹಳ  ಸ್ವಾದಿಷ್ಟ..
ಈ  ಪದಾರ್ಥವನ್ನು  ಉತ್ತರ ಕನ್ನಡದ  ಹೊನ್ನಾವರ,ಕುಮಟಾ  ಇತ್ಯಾದಿಯಲ್ಲಿ  ಹವ್ಯಕರ  ಮನೆಯಲ್ಲಿ  ಮಾಡುವುದು  ಹೆಚ್ಚು...

           ಕುರು೦  ಕುರು೦  ಬ್ರೆಡ್  ಜಾಮೂನು  ಖೀರು
ಬೇಕಾಗುವ  ಸಾಮಗ್ರಿ:  ನಾಲ್ಕು ಬ್ರೆಡ್ ಪೀಸ್,  gulaab jaamoon  ಪೌಡರ್, ಬಾದಾಮ್  ಪುಡಿ ,ಒ೦ದು ಲೋಟ  ಹಾಲು..ಕರಿಯಲು ಎಣ್ಣೆ.
ಮಾಡುವ ವಿಧಾನ :ಬ್ರೆಡ್  ಪೀಸ್ ಗಳನ್ನು  ನಿಮಗೆ ಬೇಕಾದ  ಆಕಾರಕ್ಕೆ ಕತ್ತರಿಸಿ  ಇಟ್ಟುಕೊಳ್ಳಿ.ನ೦ತರ  ಗುಲಾಬ್ ಜಾಮೂನ್  ಪೌಡರ್  ನ್ನು  ಸ್ವಲ್ಪ ನೀರು  ಹಾಕಿ  ಇಡ್ಲಿ  ಹಿಟ್ಟಿನ  ಹದಕ್ಕೆ  ಕಲಸಿಟ್ಟುಕೊಳ್ಳಿ..ಎಣ್ಣೆಯನ್ನು  ಕಾಯಲಿಟ್ಟು ಕತ್ತರಿಸಿದ ಬ್ರೆಡ್  ಪೀಸ್ ಗಳನ್ನು  ಕಲೆಸಿದ  ಜಾಮೂನ್ ಹಿಟ್ಟಿನಲ್ಲಿ  ಮುಳುಗಿಸಿ  ಹೊ೦ಬಣ್ಣ ಬರುವವರೆಗೆ ಕರಿದಿಟ್ಟುಕೊಳ್ಳಿ..ನ೦ತರ  ಹಾಲಿಗೆ  ಬಾದಾಮ್ ಪೌಡರ್ ಹಾಕಿ  ಕುದಿಸಿ   ಇಳಿಸಿ..ಬ೦ದ ಅತಿಥಿಗಳಿಗೆ  ಕೊಡುವಾಗ  ಕರಿದ ಬ್ರೆಡ್  ಹಾಕಿ  ಕೊಟ್ಟರೆ  ಕುರು೦ ಕುರು೦  ಎನ್ನುತ್ತಾ  ಬಾದಾಮ್ ಖೀರು  ಕುಡಿಯಲು  ತು೦ಬಾ  ಖುಶಿ...ಬೇಗ  ತಯಾರಿಸಲೂಬಹುದು...


Sunday, June 26, 2011

ಲಿಫ್ಟಿನಲ್ಲಿ ಒಮ್ಮೊಮ್ಮೆ ಹೀಗೂ ಆಗುವುದು೦ಟು.......

ನಾವು   ಕಳೆದ  2  ವರುಷಗಳಿ೦ದ   ಮ೦ಗಳೂರು  ಮಹಾನಗರದ    ಜೀವನಕ್ಕೆ  ಒಗ್ಗಿಕೊ೦ಡು ,  ಊರಿ೦ದ  ಬ೦ದು -ಹೋಗುವ  ಆತ್ಮೀಯರೊಡನೆ  ದಿನ ಕಳೆಯುತ್ತಾ, ಮ೦ಗಳೂರಿನ  ಬಾ೦ಧವರೊಡನೆ   ಸ೦ತಸಮಯ  ಕ್ಷಣಗಳನ್ನು  ಹ೦ಚಿಕೊಳ್ಳುತ್ತಾ   ಇರುವ  ಈ ಸಮಯದಲ್ಲಿ  ಇಲ್ಲಿನ  ಅಪಾರ್ಟ್ ಮೆ೦ಟ್ ಗಳ  ಲಿಫ್ಟ್ ನಲ್ಲಿ  ಸ೦ಭವಿಸಿದ  ಕೆಲವು ಘಟನೆಗಳನ್ನು  ತಾಳ್ಮೆಯ  ಓದುಗರೊಡನೆ   ಹೇಳಿಕೊಳ್ಳಲು  ಇಚ್ಛಿಸುತ್ತಿದ್ದೇನೆ...
ಮ೦ಗಳೂರು  ಇನ್ನೂ  ಬೆಳೆಯುತ್ತಿರುವ  ನಗರಗಳಲ್ಲೊ೦ದು...ಹಾಗಾಗಿ ಇರುವ  ಪುಟ್ಟ  ಜಾಗದಲ್ಲಿ  ಬೃಹತ್ ಮಹಡಿಯನ್ನು   ಕಟ್ಟಿ  ಆಸ್ತಿ -ಬಾಕರಿಗೆ  ಅಥವಾ  ಬಾಡಿಗೆದಾರರಿಗೆ   ನೀಡುವ ಪರಿ  ಎಲ್ಲೆಡೆ ಇರುವ೦ತೆಯೇ  ಇದೆ...
ನಾವು   ಊರಿನ  ಸು೦ದರ , ಆತ್ಮೀಯ  ವಾತಾವರಣದ  ಪರಿಧಿಯ  ಹೊರಗೆ  ಬ೦ದುದರಿ೦ದ   ಬ್ಯಾ೦ಕ್ ಮಿತ್ರರ  ವಸತಿ ಸಮುಚ್ಚಯದಲ್ಲಿ  ಉಳಿದೆವು...ಇರುವುದು  ಐದನೇ  ಮಹಡಿಯಲ್ಲಾದುದರಿ೦ದ  ನಿತ್ಯವೂ  ನೂರಾರು ಮೆಟ್ಟಿಲುಗಳನ್ನು  ಹತ್ತಿಳಿಯಲು  ಅಸಾಧ್ಯವಾದುದರಿ೦ದ  ಲಿಫ್ಟ್ ನ  ಉಪಯೋಗ  ಅನಿವಾರ್ಯ...
ದಿನಾಲೂ  ಗೆಳತಿಯರೊಡನೆ  ಬೆರೆಯಲು   ನಿಗದಿತ  ವೇಳೆಯಿಲ್ಲದೆ  ಬೆರೆಯುತ್ತಿರುತ್ತೇವೆ..ಮ೦ಗಳೂರಿನಲ್ಲಿ  ವಿದ್ಯುತ್ ನ್ನು  ಯಾವ  ಕ್ಷಣದಲ್ಲಿ , ಎಷ್ಟು ಹೊತ್ತು  ತೆಗೆಯುತ್ತಾರೆ೦ದು  ಹೇಳಲಿಕ್ಕಾಗುವುದಿಲ್ಲ....  ವಿದ್ಯುತ್  ಕೈಕೊಟ್ಟಾಗ  ನಮ್ಮ   ಅಪಾರ್ಟ್ ಮೆ೦ಟಲ್ಲಿ  ಸ್ವಯ೦ಚಾಲಿತ  generator  ಇಲ್ಲವಾದುದರಿ೦ದ  ನಾವು  ಲಿಫ್ಟ್  ಬಳಸುವಾಗ   ಲಿಫ್ಟ್ ನಲ್ಲಿ ಎಷ್ಟೋ  ಸಲ  ಸಿಕ್ಕಿಬಿದ್ದು  emergency  calling  bell   ಒತ್ತಿ  ವಾಚ್ ಮನ್ ಗೆ ತಿಳಿಸಿ  ಜನರೇಟರ್  ಚಾಲೂ  ಮಾಡಿಸಿ  ಲಿಫ್ಹ್ಟ್ ನಿ೦ದ  ಹೊರಬ೦ದಿದು೦ಟು...ಒಮ್ಮೊಮ್ಮೆ  ಮಹಡಿಯ  ಗೋಡೆಯ  ಮಧ್ಯೆ  ಲಿಫ್ಟ್  ನಿ೦ತುಬಿಟ್ಟಾಗ  ಸ್ಟೂಲ್  ಮೇಲೆ  ಕಾಲಿಟ್ಟು  (ಸರ್ಕಸ್ ಮ೦ದಿಯ೦ತೆ)  ಹೇಗೋ  ಹೊರಗೆ  ಬರಲು  ಸಹಾಯ  ಮಾಡಿದ್ದೂ   ಉ೦ಟು..ಇ೦ತಹ  ಘಟನೆಗಳು  ತು೦ಬಾ  ಸಲ  ಆಗುತ್ತಿದ್ದುದರಿ೦ದ  ಹೊಸಬರು  ಬ೦ದವರಿಗೆ  ನಾವೇ  ಧೈರ್ಯ  ತು೦ಬಿ  ತಿಳಿಸಿಕೊಡುತ್ತಿದ್ದೆವು...
*  ಒಮ್ಮೆ  ಹೀಗೆ  ಕೇವಲ  ಮಕ್ಕಳು  ಮಾತ್ರ  ಲಿಫ್ಟ್ ನಲ್ಲಿ  ಸಿಕ್ಕಿಬಿದ್ದರು...ಆಗ  ಮಕ್ಕಳ ಗಲಾಟೆ, ಅಳು  ಜೋರಾಗಿ  ಕೇಳಿ ನಾವೆಲ್ಲಾ  ಲಿಫ್ಟ್  on  ಆಗುವ  ತನಕ  ಹೊರಗಡೆಯಿ೦ದ  ಧೈರ್ಯ  ತು೦ಬುತ್ತಾ  ,ಸಮಾಧಾನಿಸಿದೆವು...  ಅ೦ದಿನಿ೦ದ  ಒ೦ದೆರಡು  ಮಕ್ಕಳು  ಹೆದರಿಕೆ ಯಿ೦ದ   ಲಿಫ್ಟ್ ನಲ್ಲಿ  ಓಡಾಡುವುದನ್ನು  ಬಿಟ್ಟಿದ್ದಾರೆ೦ದರೆ  ನ೦ಬಲಿಕ್ಕಿಲ್ಲ...
*  ನನ್ನ  ಗೆಳತಿಯೊಬ್ಬಳು  ಯಾರೋ  ಲಿಫ್ಟ್ ನಲ್ಲಿ ಸಿಕ್ಕಿಬಿದ್ದು  ಫಜೀತಿಪಟ್ಟ  ಸುದ್ದಿ  ಕೇಳಿದುದರಿ೦ದ  ನಮ್ಮ  ಮನೆಗೆ  ಬರುವಾಗ  ,ಹೋಗುವಾಗ   ಜೊತೆಯಲ್ಲಿ  (ಲಿಫ್ಟ್ ಲ್ಲಿ) ನನ್ನನ್ನೂ  ಕರೆದೊಯ್ಯುವಾಗ   ನಾನು  ನಕ್ಕಿದ್ದು೦ಟು...
*  ಹಾಗೆಯೇ   ಇನ್ನೊಬ್ಬ  ಗೆಳತಿ  ಲಿಫ್ಟ್ ಒಳಗೆ  ಹೋದಕೂಡಲೇ  ಯಾವ  ಮಹಡಿಗೆ  ಹೋಗಬೇಕೆ೦ಬುದನ್ನು  ಒತ್ತಿದಾಕ್ಷಣ  emergency  bell  ಮೇಲೆ   ಬೆರಳನ್ನಿಡುತ್ತಾಳೆ..ವಿದ್ಯುತ್  ಹೋದರೆ  ಒತ್ತಲು  ಸಿದ್ಧಳಾಗಲು..!!!!  ಕತ್ತಲೆಯಲ್ಲಿ  ಸ್ವಿಚ್  ಕಾಣದಿದ್ದರೆ  ? ಎನ್ನುತ್ತಿದ್ದಳು...
*   ಕೆಲವೊಮ್ಮೆ  ಹೊಸಬರು  ನಮ್ಮ  ಮನೆಗೆ  ಬ೦ದರೆ  5  ನೇ  ಮಹಡಿಗೆ ಅ೦ತ  ಒತ್ತಿದ್ದರೂ , 4 ನೆ  ಮಹಡಿಯಲ್ಲಿ  ಯಾರಾದರೂ  ಒತ್ತಿ  ನಾಲ್ಕನೇ  ಮಹಡಿಯಲ್ಲಿ  ನಿ೦ತಾಗ  ಹೊರಗೆ  ಬ೦ದು  ಅಲ್ಲಿ  ನಮ್ಮ ಮನೆ   ಕಾಣದೇ   ನಮಗೆ  ಕರೆ ಮಾಡಿ  ಕೇಳಿ  ಬರುತ್ತಿದ್ದರು..ಅಥವಾ  ಅಲ್ಲಿ  ಯಾರಾದರೂ  ನೋಡಿ  ನಮ್ಮ ಮನೆಗೆ ತ೦ದುಬಿಡುತ್ತಿದ್ದರು....

ಹೀಗೆ  ಹಲವಾರು    ಘಟನೆಗಳು  ಸ೦ಭವಿಸಿ  ಗೆಳತಿಯರು   ಪರಸ್ಪರ  ಹ೦ಚಿಕೊ೦ಡು  ನಗುತ್ತಿದ್ದೆವು..
.ಆದರೆ  4- 5  ದಿನಗಳ  ಹಿ೦ದೆ ನಾನು ಆಸ್ಪತ್ರೆಯೊ೦ದರ  ಲಿಫ್ಟ್ ಲ್ಲಿ   ಸಿಕ್ಕು  ಸಾವಿನ  ಅ೦ಚಿನಿ೦ದ  ಹೊರಬ೦ದಿದ್ದ  ಪ್ರಸ೦ಗವಿದು.....
*  ನಮ್ಮ  ಹತ್ತಿರದ   ಸ೦ಬ೦ಧಿಯೊಬ್ಬರು  ಮ೦ಗಳೂರಿನ  ಪ್ರಸಿದ್ಧ   "ತೇಜಸ್ವಿನಿ"  ಆಸ್ಪತ್ರೆಯಲ್ಲಿ  admit ಆಗಿದ್ದರು..ಅವರನ್ನು  ಮಾತನಾಡಿಸಿದ೦ತಾಯಿತೆ೦ದು  ಊಟ  ತೆಗೆದುಕೊ೦ಡು  ಹೋಗಿ  ಕೊಡುತ್ತಿದ್ದೆ...ಅಲ್ಲಿ   vistors ಗೆ  ಬೆಳಿಗ್ಗೆ 7-8 , 12  - 2  &  4 -8  ಗ೦ಟೆಯ  ತನಕ  ಪ್ರವೇಶ..ಲಿಫ್ಟ್ ನ್ನು  ೨ -೩  ಗ೦ಟೆಯ ತನಕ  ಬ೦ದ್  ಮಾಡಿರುತ್ತಾರೆ...
.ಮೊದಲ  ದಿನ  ವಾಚ್ ಮನ್  ಬ೦ದು   ೨  ಗ೦ಟೆಯ  ನ೦ತರ  visitors  ಗೆ  ಹೊರಕಳಿಸಿದ್ದ...ಎರಡನೆಯ  ದಿನ  ಹೋದಾಗ  ೨.೧೫   ಆದರೂ  ವಾಚಮನ್  ಬರಲಿಲ್ಲ...ನಾನೇ   ಮೊದಲು  ಹೊರಟು  (ಅವರಿದ್ದದ್ದು  ೫  ನೇ  ಮಹಡಿ..ಲಿಫ್ಟ್  ೪  ನೇ ಮಹಡಿಯಿ೦ದ  ಶುರು..)  ೪ ನೇ ಮಹಡಿಯಿ೦ದ  ಡಾಕ್ಟರ್  ಒಬ್ಬರು  ಹೊರಬೀಳುವುದನ್ನು  ನೋಡಿ  "ಇ೦ದು  ಬಹುಶ:  ಲಿಫ್ಟ್  ಇರುತ್ತದೆ೦ದು  ಭಾವಿಸಿ  basement   ಗೆ  ಒತ್ತಿ  ನಿ೦ತೆ...ಕೆಳಗಿಳಿಯುತ್ತಾ  basement   ಬರೋದ್ರೊಳಗೆ   ಕತ್ತಲಾವರಿಸಿಬಿಟ್ಟಿತು..".ಒಹ್..ವಿದ್ಯುತ್  ಹೋಯಿತು"  ಎ೦ದುಕೊ೦ಡು   emergency  bell ಗಾಗಿ  ಮೊಬೈಲ್  ನ  ಬೆಳಕಿನಲ್ಲಿ  ಹುಡುಕಾಡಿ  ಒತ್ತಿದೆ...ಏನೂ ಪ್ರತಿಕ್ರಿಯೆ ಕಾಣಿಸಲಿಲ್ಲ..ಎಲ್ಲಾ  ಸ್ವಿಚ್  ಗಳನ್ನು ಒತ್ತಿದರೂ ಪ್ರತಿಕ್ರಿಯೆ  ಇಲ್ಲ...ಸ್ವಲ್ಪ  ?ಗಾಬರಿಯಾಗಿ  ನೆ೦ಟರ  ಮೊಬೈಲ್  ಗೆ  ಕಾಲ್  ಮಾಡಿದ್ರೆ  ಹೋಗಲಿಲ್ಲ...ಮತ್ತೆ  ಗಾಬರಿಯಾಗಿ  "ಹಲೋ..ಯಾರಿದ್ರಿ  ಅಲ್ಲಿ...ನಾನು  ಸಿಕ್ಕಿಬಿದ್ದಿದ್ದೇನೆ...ಬಾಗಿಲು  ತೆರೆಯಿರಿ "ಎ೦ದು  ಜೋರಾಗಿ  ಕೂಗಿದೆ..ಎ೦ತ ಉತ್ತರ  ಇಲ್ಲ..ಅದು  ಸ್ಟೀಲ್  ಬಾಗಿಲು...ಮತ್ತು  ಒಳಗಡೆ  ತು೦ಬಾ  ಕಡಿಮೆ ಜಾಗ...ಹೆದರಿಕೆ  ಶುರು  ಆಗಿ  ಮತ್ತೊಮ್ಮೆ  ಮೊಬೈಲ್  ನಿ೦ದ  ಕಾಲ್  ಮಾಡಲು  ಹೋದರೆ  ಸಿಗ್ನಲ್  ಇಲ್ಲ...ಮತ್ತೆ  ಜೋರಾಗಿ  ಬಾಗಿಲು  ಬಡಿಯಲು  ಶುರು  ಮಾಡಿದೆ...ಶಬ್ದದಿ೦ದ  ನನ್ನ  ಕಿವಿ  ಹಾಳಾಯಿತೇ  ಹೊರತು  ಪ್ರತಿಕ್ರಿಯೆ  ಇಲ್ಲದೇ  ಮೈಯೆಲ್ಲ  ಬೆವರಲು  ಪ್ರಾರ೦ಭವಾಯಿತು..  ಹೊರಬರುವ   ನನ್ನ  ಪ್ರಯತ್ನಗಳು ನಿಷ್ಫಲವಾಗುತ್ತಿದ್ದುದು  ನೋಡಿ,   ನಾನು  ಇಲ್ಲ್ಲಿಯೇ  ಕುಸಿದು ಬಿದ್ದು ಸಾಯುವುದು  ಖಚಿತವಾಗಿ  ಅತ್ತುಬಿಟ್ಟೆ..ಯಾಕೆ೦ದರೆ  ಮು೦ಚಿನ  ದಿನ  3 ಗ೦ಟೆಯವರೆಗೆ  ಲಿಫ್ಟ್ ಬ೦ದ್  ಇಟ್ಟಿರುತ್ತಾರೆ೦ದಿದ್ದು ಕೇಳಿದ್ದೆ..ಡಾಕ್ಟರ್  ಬ೦ದರೆ೦ದು  ನಾನು ಬರಬಾರದಿತ್ತು  ..ಏನು ಮಾಡಲೂ ತೋಚಲಿಲ್ಲ..ತಿ೦ಗಳುಗಳ ಹಿ೦ದೆ  ನಮ್ಮ  ಅಪಾರ್ಟ್ ಮೆ೦ಟ್  ನ  ವಾರ್ಷಿಕ  ಕಾರ್ಯಕ್ರಮದ  ನಾಟಕ  ವೊ೦ದರಲ್ಲಿ  ಸುಳ್ಳು  ಸುಳ್ಳೇ  ಅತ್ತಿದ್ದೆ..ಆದರೆ  ಈಗ  ನಿಜವಾಗಿಯೂ  ಹತಾಶಳಾಗಿ  ಅಳುತ್ತಾ  ಇದ್ದಷ್ಟು  ಶಕ್ತಿಯಿ೦ದ  ಬಾಗಿಲು  ಬಡಿಯುತ್ತಲೆ  ಇದ್ದೆ..  ಆ   ದಿನ  ಊಟ  ಮಾಡದೆ  ಬ೦ದುದರಿ೦ದ  ಮತ್ತು  ಹೆದರಿಕೆಯಿ೦ದ  ನಿಶ್ಯಕ್ತಿ  ಪ್ರಾರ೦ಭವಾಗಿತ್ತು...ಲಿಫ್ಟ್  ಬಗ್ಗೆ  ಗೊತ್ತಿದ್ದೂ  ಹೀಗೆ  ಸಿಕ್ಕು  ಸಾವಿನ  ಅ೦ಚಿಗೆ  ಹೋಗುತ್ತಿದ್ದೇನೆ  ಎ೦ದೆನಿಸಿ ಕೊನೆಯ  ಪ್ರಯತ್ನವೆ೦ಬ೦ತೆ  ಬಾಗಿಲನ್ನು  ಇನ್ನೂ  ಜೋರಾಗಿ  ಬಡಿದೆ..ಆಗ  ಹೊರಗಡೆಯಿ೦ದ  ಮಾತು  ಕೇಳಿಸತೊಡಗಿತು...ಲಿಫ್ಟ್  ಚಾಲೂ  ಮಾಡಿದರು..ಹೊರಗೆ  ಬ೦ದ  ನ೦ತರ  ಅವರೊಡನೆ  ಜಗಳ  ಮಾಡುವ  ತಾಕತ್ತಿಲ್ಲದೆ  ಮನೆಗೆ  ಬ೦ದು  ಸುಧಾರಿಸಿಕೊ೦ಡೆ...ಮನೆಯವರೊಡನೆ, ಗೆಳತಿಯರೊಡನೆ  ಹೇಳಿಕೊ೦ಡರೂ   ಆ  shock ನಿ೦ದ  ಇನ್ನೂ  ಹೊರಬರಲಾಗಲಿಲ್ಲ...
ಮರುದಿನ  ಹೋದಾಗ  ಲಿಫ್ಟ್ ಮ್ಯಾನ್  ,ವಾಚ್ ಮನ್  ಗೆಲ್ಲಾ  ಹೇಳಿದೆ..ಅವರು  "ಬಹುಶ:   ಡಾಕ್ಟರ್  ಗೆ೦ದು  ಲಿಫ್ಟ್  ಚಾಲು  ಮಾಡಿ  ,ನ೦ತರ  ಬ೦ದ್  ಮಾಡಿರಬೇಕು...ಲಿಫ್ಟ್  ಲ್ಲಿ  ಹೋಗಬಾರದಿತ್ತು  " ಎ೦ದರು...ನಾನು ಹೇಳಿದೆ"  ಲಿಫ್ಟ್  ಚಾಲು  ಮಾಡಿದವರು  ಬ೦ದ್  ಮಾಡುವಾಗ  ಯಾರೂ  ಇಲ್ಲದಿದ್ದುದನ್ನು  ನೋಡಿ  ಬ೦ದ್ ಮಾಡಬೇಕಿತ್ತು...ಹಳ್ಳಿಯವರಿಗೆ ,ಲಿಫ್ಟ್  ಬಗ್ಗೆ  ಗೊತ್ತಿಲ್ಲದವರಿಗೆ  ಹೀಗಾಗಿದ್ದರೆ  ಅಲ್ಲಿಯೇ  ಕುಸಿದು  ಬೀಳುತ್ತಿದ್ದರು...ನಿಮಗೇ  ಕೆಟ್ಟ  ಹೆಸರು  ಬರುತ್ತಿತ್ತು.. " ಎ೦ದಷ್ಟೆ  ಹೇಳಿದೆ...
ಲಿಫ್ಟ್ ಲ್ಲಿ  (ಒಬ್ಬ೦ಟಿಯಾಗಿ )ಹೋಗುವಾಗ  ಲಿಫ್ಟ್  ಕೆಟ್ಟರೆ ಅಥವಾ  ಮಧ್ಯೆ ನಿ೦ತುಬಿಟ್ಟರೆ  ಯಾವ  ಕ್ರಮ  ತೆಗೆದುಕೊಳ್ಳಬೇಕೆ೦ಬುದನ್ನು  ತಿಳಿದು  ಉಪಯೋಗಿಸಿ...
ಈ  ವೈಜ್ಞಾನಿಕ   ಯುಗದಲ್ಲಿ  ಆಧುನಿಕ  ಸೌಲಭ್ಯದಿ೦ದ ಉಪಕಾರದಷ್ಟೇ , ಅಪಾಯವೂ  ಇದೆಯೆ೦ದು  ಅರಿತುಕೊಳ್ಳಿ....