Sunday, March 17, 2013

ಶುದ್ಧ ಕುಂಕುಮ ತಯಾರಿಸುವ ವಿಧಾನ















                ನಮ್ಮ ಹಿಂದೂ  ಸಂಸ್ಕೃತಿಯಲ್ಲಿ  ಅರಿಸಿನ ಮತ್ತು ಕುಂಕುಮಕ್ಕೆ ಮಹತ್ವವಿರುವ ಸಂಗತಿ ಎಲ್ಲರಿಗೂ ಗೊತ್ತಿದೆ..ಪೂಜೆ -ಪುನಸ್ಕಾರಗಳಲ್ಲಿ, ಸ್ತ್ರೀಯರ ಹಣೆಯಲ್ಲಿ ,ದೇವಸ್ಥಾನಗಳಲ್ಲಿ,ಹಾಗೂ ವೈದಿಕ ಸಂಸ್ಕಾರಗಳು ಇತ್ಯಾದಿ ಎಲ್ಲ ಕಡೆಗಳಲ್ಲಿ ಕುಂಕುಮಕ್ಕೆ  ಪ್ರಾಶಸ್ತ್ಯವಿದೆ..ಇಂದು    ಕಲಬೆರಕೆ ಹಾಗೂ ರಾಸಾಯನಿಕಯುಕ್ತ ಕುಂಕುಮವನ್ನು ಎಲ್ಲೆಡೆ ಕಾಣುತ್ತೇವೆ..ಇದರಿಂದ ದಿನ ನಿತ್ಯ ಹಚ್ಚಿಕೊಳ್ಳುವ ಕುಂಕುಮದ ಪರಿಶುದ್ದತೆ ಕಡಿಮೆಯಾಗಿ ನಾನಾ ವಿಧದ ಸೋಂಕುಗಳಿಗೆ   ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ..

ಕುಂಕುಮವನ್ನು ತಯಾರಿಸುವ ಕುರಿತು ಅನೇಕ ಅಭಿಪ್ರಾಯಗಳಿದ್ದು ,ಆಧುನಿಕ ಕಾಲದಲ್ಲಿ ಅರಿಸಿನಕ್ಕೆ ಸುಣ್ಣ ಸೇರಿಸುವುದರ ಮೂಲಕ ಅಥವಾ ಮತ್ಯಾವುದೋ ದ್ರವ್ಯ ಸೇರಿಸುವ ಮೂಲಕ ಕೆಂಪು ಬಣ್ಣದ ಪದಾರ್ಥ ಹೊಂದುವುದನ್ನು  ಅನುಸರಿಸದೇ ವಿನೂತನ ಪದ್ಧತಿ ಹಾಗೂ ಔಷಧದ ಅಂಶವಾಗಿ ಕುಂಕುಮ ಸಿದ್ಧವೆನ್ನುವ ವಿಧಾನವನ್ನು ಸಂಶೋಧಿಸಿದವರಲ್ಲಿ ತಮಿಳುನಾಡಿನ ಶ್ರೀಮತಿ ರಾಜಮ್ಮ ಕೃಷ್ಣಮೂರ್ತಿ ಹಾಗೂ ಶಿವಮೊಗ್ಗದ ಶ್ರೀ ಆನಂದ ಆ.ಶ್ರೀ.ಮುಂತಾದವರು ಪ್ರಮುಖರು.ಶ್ರೀ ರಾಮಚಂದ್ರಾಪುರ ಮಠದ ಪ.ಪೂ.ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಆಶೀರ್ವಾದದಿಂದ ಸಾವಯವ ಕೃಷಿ ಪರಿವಾರದ ಮುಖ್ಯಸ್ಥರಾದ ಶ್ರೀ ಆನಂದ ಅವರು ರಾಜ್ಯದ ವಿವಿಧೆಡೆಗಳಲ್ಲಿ ಕುಂಕುಮದ ಪ್ರಾತ್ಯಕ್ಷಿಕೆಯನ್ನು ಮಾಡಿ ಮಾರ್ಗದರ್ಶಕರಾಗಿದ್ದಾರೆ..ಅವರ ಮಾರ್ಗದರ್ಶನ ಅನುಸರಿಸಿ ಧರ್ಮ-ಸಂಸ್ಕೃತಿ ಪ್ರತಿಷ್ಠಾನವು ಆ ಪರಂಪರೆಯನ್ನು ಮುಂದುವರಿಸುತ್ತಿದೆ.

 ಈ ಕೆಳಗೆ ತಿಳಿಸಿದ ವಿಧಾನದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗಾನುಸಾರದಲ್ಲಿ ಜರುಗಿದ  ಕೋಟಿ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡ ಮಹಿಳೆಯರಾದಿಯಾಗಿ ಎಲ್ಲರೂ ಶುದ್ಧ ಕುಂಕುಮ ತಯಾರಿಸಿ ಅಥವಾ ಆ ವಿಧಾನದಲ್ಲಿ ತಯಾರಿಸಿದ ಕುಂಕುಮ ಕೊಂಡುಕುಂಕುಮಾರ್ಚ ಲಲಿತಾಸಹಸ್ರನಾಮ ಕುಂಕುಮಾರ್ಚನೆಯನ್ನು ಕೈಗೊಂಡು   ಶ್ರೀ ಗುರುಗಳ ಹಾಗೂ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಈಗಲೂ  ತಮಗೆ ಬೇಕಾದ ಕುಂಕುಮವನ್ನು ತಾವೇ ತಯಾರಿಸಿಕೊಳ್ಳುವುದನ್ನು ನಾವು ಕಾಣಬಹುದಾಗಿದೆ..

ಹಾಗಾಗಿ ಪರಿಶುದ್ಧ ಕುಂಕುಮವನ್ನು ನಾವೇ ತಯಾರಿಸಿಕೊಂಡರೆ ಎಷ್ಟು    ಚೆನ್ನ ಅಲ್ಲವೇ...

ಅರ್ಧ ಕಿಲೊ ಕುಂಕುಮ ತಯಾರಿಕೆಗೆ ಬೇಕಾಗುವ ವಸ್ತುಗಳು.

೧.ಅರಿಸಿನ ಬೇರು  ೧/೨ ಕಿಲೊ (ಕಡಲೆ ಕಾಳಿನಷ್ಟು ಗಾತ್ರದಲ್ಲಿ  ಕತ್ತರಿಸಿದ್ದು)
೨.ಬಿಳಿಗಾರ ೭೫ ಗ್ರಾಮ್ (ಹಪ್ಪಳದ ಖಾರ ಅಲ್ಲ)  (ಹಿಟ್ಟು ಮಾಡಿದ್ದು)
೩.ಪಟಕ (ಸ್ಫಟಿಕ) ೫ ಗ್ರಾಮ್ (ಹಿಟ್ಟು ಮಾಡಿದ್ದು)
೪.ಲಿಂಬೆರಸ ೩೫೦ ಮಿ.ಲೀ. (ಸುಮಾರು ೩೫ ರಿಂದ ೪೦ ಲಿಂಬೆ ಹಣ್ಣುಗಳಿಂದ ತಯಾರಿಸಿದ ಕುಸುಮ ಮತ್ತು ಬೀಜ ರಹಿತ)
೫.ಶುದ್ಧ ಆಕಳ ತುಪ್ಪ    ೫೦ಗ್ರಾಮ್ (ಕರಗಿದ ಆದರೆ ಉಷ್ಣವಾಗಿರದ )

ವಿಧಾನ:- ಅದೇ ದಿನ ತಯಾರಿಸಿದ ಲಿಂಬೆ ರಸದಲ್ಲಿ ಬೆಳಿಗ್ಗೆ ೮ ಗಂಟೆಗೆ ಸ್ಫಟಿಕ ಹಾಗೂ ಬಿಳಿಗಾರವನ್ನು ಮಿಶ್ರ ಮಾಡಿ.ಅದು ಕರಗಿದ ಮೇಲೆ ಅರಿಸಿನ ತುಣುಕುಗಳನ್ನು ಬೆರೆಸಿ.ಸುಮಾರು ೨ ತಾಸುಗಳವರೆಗೆ ನಿಯತವಾಗಿ ಕಲಸುತ್ತಿರಬೇಕು. ಸಂಜೆ ೫ ಗಂಟೆಗೆ ರಸ ಹೀರಿಕೊಂಡ ಅರಿಸಿನ ತುಣುಕುಗಳನ್ನು ಮುತ್ತುಗದ ಎಲೆ ಅಥವಾ ಬಾಳೆ ಎಲೆಯ ಮೇಲೆ ಬಿಡಿ ಬಿಡಿಯಾಗಿ ಹರಡಬೇಕು.ಪ್ರತಿದಿನ ಒಮ್ಮೆ  ಎಲೆಯ ಮೇಲಿರುವ ಅರಿಸಿನ ಕಣಗಳನ್ನು ಕೈಯಾಡಿಸುತ್ತಿರಬೇಕು. ಯಾವುದೇ ಕಾರಣಕ್ಕೂ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಬಾರದು..ನೆರಳಿನಲ್ಲಿ ಒಣಗಿಸಿದಾಗ ಮಾತ್ರ ಕುಂಕುಮಕ್ಕೆ  ಸರಿಯಾದ ಕೆಂಪು ಬಣ್ಣ ಬರುತ್ತದೆ.
ಎಂಟು ದಿನಗಳ ನಂತರ ಅದನ್ನು ಸಣ್ಣದಾಗಿ ಕುಟ್ಟಬೇಕು. ಅನಂತರ ಪುಡಿಯನ್ನು ಜರಡಿ ಹಿಡಿದು ಅಥವಾ ವಸ್ತ್ರದಲ್ಲಿ ಸೋಸಿ ಅತಿ ನುಣುಪಾದ ಕುಂಕುಮವನ್ನು  ಬೇರ್ಪಡಿಸಿಕೊಳ್ಳಿ. ಅದಕ್ಕೆ ೫೦ ಗ್ರಾಮ್ ಕರಗಿದ ಆಕಳ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲೆಸಿದರೆ ಅರ್ಧ ಕಿಲೊ ಕೆಂಪಾದ ,ಸುವಾಸನಾಭರಿತ ಶುದ್ಧ ಕುಂಕುಮ ತಯಾರಾಗುತ್ತದೆ..

ಕುಂಕುಮ ತಯಾರಿಕೆಯ ಶಾಸ್ತ್ರೀಯ ದಿನ 
ಫಾಲ್ಗುಣ ಮಾಸ ,ಶುಕ್ಲಪಕ್ಷ ,ಏಕಾದಶೀ (ಮಾರ್ಚ ತಿಂಗಳು)

ಕೃಪೆ :ಧರ್ಮ-ಸಂಸ್ಕೃತಿ ಪ್ರತಿಷ್ಠಾನಮ್  ರವರ ಕುಂಕುಮಾರ್ಚನೆ ಪುಸ್ತಕ..