Thursday, May 22, 2014

ನನ್ನ ಹೆಸರು ಯಾರಿಗಾದರೂ ಇದೆಯಾ?

      ಮಾನವನಾಗಿ ಹುಟ್ಟಿದ ಮೇಲೆ ಅವನಿಗೊಂದು ಹೆಸರಿಡುವುದು ಒಂದು ಪದ್ಧತಿ.
ಹುಟ್ಟಿದ ಮಗು ಗಂಡು ಅಥವಾ ಹೆಣ್ಣಾದರೆ ಅವರಿಗೆ ಹುಟ್ಟಿದ ನಕ್ಷತ್ರದಲ್ಲಿ ಬರುವ ಕೋ,ಕಾ,ಲಾ,ಲೀ,ಪ ಇತ್ಯಾದಿ ಮೂಲ ಅಕ್ಷರಗಳಿಗೆ ಸರಿ ಹೊಂದುವಂತಹ ದೇವರ ಹೆಸರನ್ನು  ಇಡುವುದು ಮೊದಲಿನಿಂದಲೂ ರೂಢಿಯಲ್ಲಿ ಬಂದಿದೆ.ಆಮೇಲೆ ಪ್ರೀತಿಯಿಂದ ಕೃಷ್ಣನಿಗೆ -ಕಿಟ್ಟಿ,ಕುಟ್ಟು, ದತ್ತಾತ್ರೇಯನಿಗೆ - ದತ್ತು,ಪರಮೇಶ್ವರನಿಗೆ -ಪರಮ,ಪಮ್ಮೇಚ,ಸುಬ್ರಾಯ/ಸುಬ್ರಹ್ಮಣ್ಯನಿಗೆ -ಸುಬ್ಬ,ಸುಬ್ಬು,ಸುಬ್ಬಣ್ಣ,ಪಾರ್ವತಿಗೆ-ಪಾತಿ,ಪಾತು,ಸರಸ್ವತಿಗೆ ಸರು,ಸರಸು, ಮಾಲಿನಿ ಗೆ ಮಾಲಿ,ಮಾಲು,ಭಾಗೀರತಿ ಗೆ ಬಾಗಿ,ಬಾಗು,ಇತ್ಯಾದಿಯಾಗಿ ಚಿಕ್ಕದಾಗಿ ಕರೆಯುತ್ತಿದ್ದರು..ಇನ್ನೂ ಕೆಲವರು ಪ್ರೀತಿಯಿಂದ ಅಪ್ಪಿ,ಅಪ್ಪು,ಪುಟ್ಟ,ಪುಟ್ಟಿ,ಸಣ್ಣಿ,ಇತ್ಯಾದಿ ಕರೆಯುತ್ತಿದ್ದರು.
ಇತ್ತೀಚೆಗಂತೂ ಮಕ್ಕಳಿಗೆ ಇಡುವ ಹೆಸರಿಗೆ ಅರ್ಥವೇ ಇರುವುದಿಲ್ಲ.ಅಥವಾ ಕರೆಯಲು ಅಥವಾ ನೆನಪಿಡಲು ಬರದಂಥ ಹೆಸರುಗಳಿರುತ್ತವೆ..ಇಂಗ್ಲೀಶ್ ಶಬ್ದಗಳಿಂದ ತುಂಬಿರುವ ಡಾಲಿ,ಪಿಂಕಿ,ಡಿಂಕು ಎಂದು ಕರೆಯುವವರೇ   ಜಾಸ್ತಿ.(ಇದು ಇಲ್ಲಿ ಪ್ರಸ್ತುತವಲ್ಲ)
     ನಾ ಹುಟ್ಟಿದ ಮನೆ ಅವಿಭಕ್ತ ಕುಟುಂಬ.ಜೊತೆಗೆ ಸಂಪ್ರದಾಯದ ಪೌರೋಹಿತ್ಯ ಕುಟುಂಬ.ಎಲ್ಲಾ ವಯಸ್ಸಿನ ಮಕ್ಕಳಿರುವ ಈ ಕುಟುಂಬದಲ್ಲಿ ಗಂಡು-ಹೆಣ್ಣು ಮಕ್ಕಳಿಗೆಲ್ಲಾ ಇಟ್ಟಿದ್ದು ದೇವರ ಹೆಸರು..ಆದರೆ ಪ್ರೀತಿಯಿಂದ ಕೆಲವರಿಗೆ ಅಪ್ಪು,ಗುಮ್ಮೆ,ದತ್ತು ,ಅಪ್ಪಿ ,ಗಪ್ಪಿ ಎಂದೂ ಕರೆಯುವುದಿದೆ.
    ನಾನು ಹುಟ್ಟಿದಾಗ ನನ್ನ ನಕ್ಷತ್ರದ ಪ್ರಕಾರ ’ಲ ’ಕಾರದ ಹೆಸರು ಇಡಬೇಕೆಂದು ಲಕ್ಷ್ಮಿ ಅಂತ ಇಟ್ಟರಂತೆ.ಮೊದಲೇ ಹೇಳಿದಂತೆ ನಮ್ಮದು ಕೂಡು ಕುಟುಂಬವಾದ್ದರಿಂದ ನನ್ನ ಅಜ್ಜನ ತಮ್ಮನ ಹೆಂಡತಿ -ಸಣ್ಣಮ್ಮ- (ಈಗಲೂ ಗಟ್ಟಿ ಮುಟ್ಟಾಗಿರುವ ೯೦ ವರುಷದಾಕೆ)  ( ನಾವೆಲ್ಲ ಅಪ್ಪ ಕರೆಯುವಂತೆ ’ಚಿಕ್ಕಿ’ ಅಂತ ಕರೆಯೋದು..) ತನಗೆ ಹೆಣ್ಣು ಮಕ್ಕಳಿಲ್ಲವೆಂದು ನನ್ನನ್ನು ಎತ್ತಿ ಮುದ್ದಾಡುವುದು ಜಾಸ್ತಿಯಲ್ಲದೇ ಎಲ್ಲರಿಗಿಂತ ಹೆಚ್ಚಿಗೆ ಪ್ರೀತಿ ತೋರಿಸುತ್ತಿದ್ದಳಂತೆ..ಈಗಲೂ ಆ ಪ್ರೀತಿ ಕಮ್ಮಿಯಾಗಿಲ್ಲ.ಅವಳು ಆಗಿನ ಕಾಲದ ೫ ನೇಕ್ಲಾಸ್ ವರೆಗೆ ಕಲಿತಿದ್ದು .ನಾ ಹುಟ್ಟಿದಾಗ ಸ್ವಾತಂತ್ರ್ಯ ಸಿಕ್ಕು ಕೆಲವೇ ವರ್ಷಗಳಾದುದರಿಂದ ನನಗೆ ಪ್ರೀತಿಯಿಂದ ’ಝಾನ್ಸಿ ರಾಣಿ ಲಕ್ಷ್ಮಿಬಾಯಿ” ಎನ್ನುತ್ತಾ ಕರೆಯುತ್ತಿದ್ದಳಂತೆ.ಹಾಗೆಯೇ ಕರೆಯುತ್ತಾ ಅಷ್ಟು ಉದ್ದದ ಹೆಸರು ಹೇಳಿ  ಕರೆಯುವುದು ಕಷ್ಟ ಅಂತ ’ಜಾನ್ಸಿ’ ಅಂತ ಕರೆಯುತ್ತಿದ್ದರಂತೆ.
   ೬ ವರ್ಷವಾಗುತ್ತಲೇ ಕನ್ನಡ (ಪ್ರಾಥಮಿಕ ಶಾಲೆ) ಶಾಲೆಗೆ ಹೆಸರು ಹಚ್ಚಿದರೂ  ಛಳಿಗಾಲದಲ್ಲಿ ಛಳಿ,ಮಳೆಗಾಲದಲ್ಲಿ ಒದ್ದೆ,ಬೇಸಿಗೆಯಲ್ಲಿ ಸೆಕೆ ಅನ್ನುತ್ತಾ ನನ್ನತಾಯಿ  (ನಮಗೆಲ್ಲಾ)೪ ನೇ ಕ್ಲಾಸಿನವರೆಗೂ ಸರಿಯಾಗಿ ಶಾಲೆಗೆ ಕಳಿಸದಿದ್ದರೂ ತಾನೇ ತಕ್ಕಮಟ್ಟಿಗೆ ಮನೆಯಲ್ಲಿ ಕಲಿಸುತ್ತಿದ್ದಳು.ಶಾಲೆಯಲ್ಲಿರುವವರೆಲ್ಲಾ   ಒಳ್ಳೆಯ ಮಾಸ್ತರು,ಅಕ್ಕೋರು ಆದುದದರಿಂದ ಮತ್ತು ನಮ್ಮ ಮನೆಯ ಮೇಲಿನ ಅಭಿಮಾನ ಜೊತೆಗೆ ನಾವೆಲ್ಲಾ  ಜಾಣ ಮಕ್ಕಳಾದುದರಿಂದ ಕಲಿಸಿದುದನ್ನು ಬೇಗ ಕಲಿತು ಕ್ಲಾಸಿಗೆ ಮೊದಲಿಗರಾಗುತ್ತಿದ್ದೆವು.
    .ಆಗ ಶಾಲೆಯಲ್ಲಿಯೂ ನನ್ನನ್ನು ಎಲ್ಲರೂ ಜಾನ್ಸಿ ಅಂತಲೇ ಕರೆಯುತ್ತಿದ್ದರು.ಹಾಗಾಗಿ ಲಕ್ಷ್ಮಿ ಎಂಬ ಹೆಸರು ಹಾಜರಿ ಪುಸ್ತಕದಲ್ಲಿ ನಾಮಕಾವಸ್ತೆಗೆ ಮಾತ್ರ ಇತ್ತು..ಸಂಜೆ ಕನ್ನಡ ಶಾಲೆ ಬಿಟ್ಟು ಬರುವಾಗ ಹೈಸ್ಕೂಲಿಂದ  ಬರುವ ಮಕ್ಕಳು ಎದುರಿಗೆ ಸಿಗುತ್ತಿದ್ದರು..ಎಲ್ಲರೂ ಎದುರಲ್ಲಿರುವವರ ಹೆಸರನ್ನು ಪ್ರೀತಿಯಿಂದ ಹೇಳುವುದು ರೂಢಿಯಾಗಿತ್ತು.ಪ್ರತಿದಿನವೂ  ಇದು ಮಾಮೂಲಿಯಾಗಿತ್ತು..ಒಬ್ಬರಿಗೊಬ್ಬರು ಠೂ ಬಿಟ್ಟವರಿದ್ದರೆ ಅವರ ಹೆಸರನ್ನು ಕರೆಯುತ್ತಿರಲಿಲ್ಲ.  ಹೈಸ್ಕೂಲ್ ಲ್ಲಿ ನಮ್ಮೂರಿನವರೇ ಮಾಸ್ಟರ್ ರು ಜಾಸ್ತಿ ಇದ್ರು.ಅವ್ರು ಸೈಕಲ್ ಲ್ಲಿ ಬರ್ತಿದ್ರು.ನಾನು ಎದುರಿಗೆ ಸಿಕ್ಕಾಗ ಟಿ.ಎನ್ .ಭಾಗ್ವತ್ ಎನ್ನುವವರು ಪ್ರೀತಿಯಿಂದ ’ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ರಣ ಚಂಡಿ ಕೀ’ ಎನ್ನುತ್ತಿದ್ದರು, ಜೊತೆಗೆ ಉಳಿದವರು ಜೈ ಅನ್ನುತ್ತಿದ್ದದ್ದು ಇನ್ನೂ ಕಿವಿಯಲ್ಲಿ  ಮೊಳಗುತ್ತಿರುತ್ತದೆ.  ಈಗ ಆ  ಸವಿ ಘಳಿಗೆ ಕೇವಲ  ನೆನಪಷ್ಟೆ.ಅವರು ಸ್ವರ್ಗದಲ್ಲಿದ್ದು ಇದನ್ನು ಓದುತ್ತಿರಬೇಕು..!!.ಈಗಿನ ಮಕ್ಕಳಿಗೆ ನಡೆದು ಶಾಲೆಗೆ ಹೋಗುವ ಪ್ರಮೇಯವೇ    ಬರೋಲ್ಲ.ಆಟೊದಲ್ಲೊ,ಶಾಲಾ ವಾಹನದಲ್ಲಿ ಹೋಗುವವರು - ಅದರಲ್ಲೂ ಇಂಗ್ಲೀಷ್ ಮಾಧ್ಯಮದಲ್ಲಿ ಓದುವವರೇ ಜಾಸ್ತಿ..ನಾವೆಲ್ಲಾ ೮ ನೇ ವರ್ಗದಿಂದ    ಪಿ.ಯು.ಸಿ.೨ ನೇ ವರುಷದವರೆಗೂ ೩ ಮೈಲಿ ನಡೆದೇ  ಹೋಗಿ ಬರುತ್ತಿದ್ದೆವು ಕಾಲಿಗೆ ಚಪ್ಪಲಿಯೂ ಇಲ್ಲದೇ...!!

      ಹೈಸ್ಕೂಲಿಗೆ ಹೋದರೂ ಊರವರೇ ಮಾಸ್ತರು ಇದ್ದಿದ್ದರಿಂದ ನನ್ನ ಹೆಸರು ಎಲ್ಲರ ಬಾಯಲ್ಲೂ ಜಾನ್ಸಿ ಅಂತಲೇ  ಬರುತ್ತಿತ್ತು..ಲಕ್ಷ್ಮಿ ಅಂತ ಕರೆಯುವವರೇ ಇಲ್ಲವಾಗಿತ್ತು..
ಹಾಗೆಯೇ ಕಾಲೇಜಿಗೆ ಹೋದರೂ ಜೊತೆಯಲ್ಲಿ ಬಾಲ್ಯದ ಗೆಳತಿ ಇದ್ದುದರಿಂದ ನನಗೆ ಎಲ್ಲರೂ ಜಾನ್ಸಿ ಅಂತಲೇ ಕರೆಯುತ್ತಿದ್ದರು.ಒಬ್ಬಿಬ್ಬರು ಮಾತ್ರ ಲಕ್ಷ್ಮಿ ಅಂತ ಕರೆಯುತ್ತಿದ್ದರು.
ಮದುವೆಯಾಗುವ ಸಮಯ ದಲ್ಲಿ ಮಾತ್ರ ಒಮ್ಮೆ ಗಲಿಬಿಲಿಯಾಗಿದ್ದು ಈಗ ನಗು ಬರಿಸುತ್ತೆ..ಮುಹೂರ್ತ ಬೆಳಿಗ್ಗೆ ೮ ಗಂಟೆಗೆ ಇತ್ತು.ಮನೆಯಲ್ಲಿಯೇ ಮದುವೆ.ಛಳಿಗಾಲ ಬೇರೆ..ತಾಳಿ ಕಟ್ಟಿದ ಮೇಲೆ ಮಾಡುವ ಕ್ರಮಗಳಿಗೆ ಹೆಂಡತಿ ಕೈಯಲ್ಲಿ ನೀರು ಹಾಕಿಸುವುದು ಇದ್ದುದರಿಂದ ಪುರೋಹಿತರು ಲಕ್ಷ್ಮಿ ನೀರು ಹಾಕು ಅಂದರೂ ಅದೇನೊ ಲಕ್ಷ್ಮಿ ಅನ್ನೋದು ಮಂತ್ರದ ಭಾಗ ಅಂದುಕೊಂಡು ಸುಮ್ಮನೆ ಕೂತಿದ್ದರೆ ನಮ್ಮನೆಯವರು ಮೊಣಕೈಯಿಂದ ತಿವಿದು ಹೇಳುವಾಗ ಫ್ಲ್ಯಾಶ್ ಆಗುತ್ತಿತ್ತು..ಗಂಡನ ಮನೆಗೆ (ಸೋದರತ್ತೆಯ ಮನೆಯೂ ಹೌದು)  ಬಂದಾಗ ಅತ್ತಿಗೆ,ಮತ್ತಿತರರು   ನಾವಾದರೂ ಲಕ್ಷ್ಮಿ ಅಂತ ಕರೀತೇವೆ ಅಂತ ಒಮ್ಮೆ ಕರೆದರೂ ಎಲ್ಲರೂ ಜಾನ್ಸಿ ಅನ್ನೋವಾಗ  ಅವರ ಬಾಯಲ್ಲೂ ಜಾನ್ಸಿ ಅಂತ ಬರುತ್ತೆ..
ನನಗೆ ಹೊಸದಾಗಿ ಯಾರಾದ್ರೂ ಪರಿಚಯವಾದ್ರೆ ನನ್ನ ಹೆಸರು ’ಲಕ್ಷ್ಮಿ’ ಅಂದರೂ ಉಳಿದವರು ಜಾನ್ಸಿ ಅನ್ನೋವಾಗ .ನನ್ನನ್ನು ಯಾವ ರೀತಿ ಕರೆಯಬೇಕೆಂದು ಗೊತ್ತಾಗದೇ ಕೆಲವರು ಗಲಿಬಿಯಾಗುವುದೂ ಉಂಟು..
   ಒಮ್ಮೆಯಂತೂ ನನ್ನ ಮೈದುನನ ಮಗ ಊರ ದೇವಸ್ಥಾನದಲ್ಲಿ ಕೊಟ್ಟ ಪೂಜೆಯ ಪ್ರಸಾದ ತಗಂಡು ಬರಲು ಹೋದಾಗ ಲಕ್ಷ್ಮಿ ಭಟ್ಟ ಅನ್ನೊ ಹೆಸರಲ್ಲಿ ಪೂಜೆ ಇದೆ.ನಮ್ಮ ಮನೆಯವರ ಪೂಜೆ ಇಂದು ಇಲ್ಲ ಎಂದು ಬರಿಗೈಯಲ್ಲಿ ಬಂದುಬಿಟ್ಟ..ಆಗ ನಿನ್ನ ದೊಡ್ಡಮ್ಮನ ಹೆಸರು ಲಕ್ಷ್ಮಿ ಎಂದು ತಿಳಿ ಹೇಳಿದರೂ ನಂಬಲಿಲ್ಲ..
ಮಂಗಳೂರಿನಲ್ಲಿದ್ದಾಗ ನಮ್ಮೂರಿನ ಪರಿಚಿತರು ಬಂದಿದ್ದರು. ಇವತ್ತು ಜಾನ್ಸಿ ಮನೆಗೆ ಊಟಕ್ಕೆ ಕರೆದಿದ್ದಾರೆ ಅಂದರಂತೆ.ಅಯ್ಯೊ!!ಯಾವ ಕ್ರಿಶ್ಚನ್ನರ ಮನೆಗೆ ಊಟಕ್ಕೆ  ಕರೆದುಕೊಂಡು  ಹೋಗ್ತೀಯಾ ಅಂತ ಜೊತೆಲಿದ್ದವರು ಕೇಳಿದ್ದರಂತೆ..
ಕೆಲವರಂತೂ  'ಪುರೋಹಿತರ ಮನೆ ಕೂಸಾಗಿ ಕ್ರಿಶ್ಚನ್  ಹೆಸ್ರು ಯಾಕೆ ಇಟ್ಟುಕೊಂಡಿದ್ದೀಯಾ' ಅಂತ ಕೇಳುವುದೂ ಉಂಟು.

ಪ್ರೀತಿಯಿಂದ ವಿವಿಧ ರೀತಿಯಲ್ಲಿ ಕರೆಯುವ ಹೆಸರುಗಳಿದ್ದರೂ ಜಾನ್ಸಿ ಎಂದು ಕರೆಸಿಕೊಂಡವರು ಇಲ್ಲವೇ ಇಲ್ಲ ಅಂದುಕೊಂಡಿದ್ದೆ..ಆದರೆ ಯಾವುದೋ ಕನ್ನಡ ಧಾರಾವಾಹಿಯಲ್ಲಿ ’ಝಾನ್ಸಿ ಸುಬ್ಬಯ್ಯ ’ಎನ್ನೊ ನಟಿಯ ಹೆಸರು ಓದಿದ ನೆನಪು..ಆದರೂ ನನ್ನಂತೆ ಜಾನ್ಸಿ ಎಂದು ಕರೆಸಿಕೊಂಡಿಲ್ಲ ಎಂಬ ಹೆಮ್ಮೆ (ಗರಿಮೆ) ನನ್ನದು.. !!
೨-೩ ವರ್ಷಗಳ ಹಿಂದೆ ಫೇಸ್ ಬುಕ್ ಎಂಬ ಜಾಲದಲ್ಲಿ ಸೇರಿಕೊಳ್ಳುವಾಗ ಮೊದಲಿಗೆ ನನ್ನ ನಿಜ ನಾಮಧೇಯವನ್ನು ಹಾಕಿ,ನಂತರ ಕರೆಯುವ ಹೆಸರು, ನಂತರ ಮನೆಯ ಹೆಸರನ್ನು  ಸೇರಿಸಿ ಹಾಕಿಕೊಂಡಾಗ ಯಾಕೆ ಇಷ್ಟುದ್ದದ ಹೆಸರು,ಜಾನ್ಸಿ ಅಂತ ಯಾಕಿದೆ ಅಂತೆಲ್ಲಾ ಕೇಳಿದವರಿಗೆ ಪ್ರತ್ಯೇಕವಾಗಿ ಉತ್ತರಿಸುತ್ತಿದ್ದರೂ ಬ್ಲಾಗ್ ಲ್ಲಿ ಬರೆದು ಎಲ್ಲರ ಮುಂದೆ ಹಂಚಿಕೊಳ್ಳುವ ಇಚ್ಛೆಯಿಂದ ಇಲ್ಲಿ  ಬರೆದಿದ್ದನ್ನು ಸ್ವೀಕರಿಸುತ್ತೀರಷ್ಟೆ..?
ಪ್ರೀತಿಯಿಂದ ’ಜಾನ್ಸಿ’ಎಂದು ಕರೆದು,ನನ್ನನ್ನು ಎತ್ತಿ,ಮುದ್ದಾಡಿದ (ಸಣ್ಣಮ್ಮ) -ಚಿಕ್ಕಿಯೊಂದಿಗೆ ನನ್ನ ಭಾವಚಿತ್ರವನ್ನು  ಅವಳ ಮೊಮ್ಮಗನ ಮದುವೆಗೆ ಹೋದಾಗ ತೆಗೆಸಿಕೊಂಡಿದ್ದು ಇಲ್ಲಿದೆ...