Thursday, April 7, 2011

ಮನೆಯಾಕೆಯ ಉಳಿತಾಯದ ಗುಟ್ಟು ........ಬಿ೦ದು-ಬಿ೦ದುವಿನಿ೦ದ ಸಿ೦ಧು.....

ನಮ್ಮ  ಮನೆಯಲ್ಲಿ  ಇ೦ತಿಷ್ಟೇ  ಖರ್ಚು  ಮಾಡುವದು, ಇ೦ತಿಷ್ಟೇ  ಉಳಿಸುವುದು  ಎ೦ಬ  ಪದ್ಧತಿಯಿಲ್ಲವಾದರೂ  ದಿನಸಿ  ಸಾಮಾನುಗಳನ್ನು  ಖರ್ಚಾದ೦ತೆ  ತರುವುದು, ಬಟ್ಟೆ, ಚಿನ್ನ  ಇತ್ಯಾದಿಗಳನ್ನು  ಅಗತ್ಯ  ಬಿದ್ದಾಗ  ಇಲ್ಲವೇ  ವಿಶೇಷ  ಸ೦ದರ್ಭಗಳಲ್ಲಿ  ಖರೀದಿಸುವ   ಪ್ರಕ್ರಿಯೆ   ನಡೆಯುತ್ತ  ಬ೦ದು  19  ವರ್ಷಗಳು  ನಿರಾತ೦ಕವಾಗಿ  ಕಳೆದುವೆ೦ದರೆ  ಒಮ್ಮೊಮ್ಮೆ  ನಮಗೇ  ಆಶ್ಚರ್ಯವೆನಿಸುತ್ತದೆ.. ಇರಲು  ಬೆಚ್ಚನೆಯ  ಮನೆ, ತಿರುಗಾಟಕ್ಕೆ  ಕಾರು, ಸ್ಕೂಟರ್, ಬ್ಯಾ೦ಕ್ ಲ್ಲಿ  ಉದ್ಯೋಗವಿರುವ  ಪತಿ, ಪದವಿ - ಪೂರ್ವ  ಕಾಲೇಜು,  ಮಾಧ್ಯಮಿಕ   ಶಾಲೆಗಳಲ್ಲಿ  ಓದುತ್ತಿರುವ  ಹೆಣ್ಣುಮಕ್ಕಳಿಬ್ಬರು,  ಭವಿಷ್ಯ  ಜೀವನ  ಊಹಿಸಿ   ಕ೦ಗೆಡದ  ಯಜಮಾನರ  ಸ್ವಭಾವವಿದ್ದಾಗ್ಯೂ  ಪ್ರಾಮಾಣಿಕತೆಯ  ನನ್ನ  ಉಳಿತಾಯ  ಕ್ರಮಗಳಲ್ಲಿ  ಕೆಲವು  ನಿಮ್ಮ  ಮು೦ದಿವೆ..
* ಮನೆ-ಕೆಲಸದವಳನ್ನು  ಇಟ್ಟುಕೊಳ್ಳದೆ   ಮನೆ ಕೆಲಸ  ನಾನೇ  ಮಾಡುತ್ತೇನೆ...
*ಇಸ್ತ್ರಿಗಾಗಿ  ಬೇರೆಡೆಗೆ  ಹೋಗುವದಿಲ್ಲ...
*ಬಾಯಿ  ಚಪಲತೆಯ  ತಿ೦ಡಿಗಳನ್ನು  ಮನೆಯಲ್ಲಿಯೇ ತಯಾರಿಸುತ್ತೇನೆ..ಇದರಿ೦ದ  ಆರೋಗ್ಯಕ್ಕೂ  ಒಳ್ಳೆಯದು,  ಖರ್ಚಿನಲ್ಲೂ ಉಳಿತಾಯ....
*ದಿನ - ನಿತ್ಯಕ್ಕೆ  ಬೇಕಾದ  ಹೂವು, ತುಳಸಿ, ಕರಿಬೇವು,, ಬಸಳೆ,, ತೊ೦ಡೆ  ಕಾಯಿ, ಬಾಳೆ ಕಾಯಿ  ಇತ್ಯಾದಿ  ಮನೆಯ  ಹಿತ್ತಲಿನಲ್ಲಿ  ಬೆಳೆಯುತ್ತೇನೆ..
* ಸೀರೆಗೆ  ಫಾಲ್ಸ್  ಹಚ್ಚುವದು, ರವಿಕೆ, ಮಕ್ಕಳ  ಬಟ್ಟೆ,  ದಿ೦ಬಿನ  ಕವರ್  ಇತ್ಯಾದಿಗಳನ್ನು  ನಾನೇ  ಹೊಲಿಯುವದರಿ೦ದ  ಹಣದ  ಉಳಿತಾಯದ  ಜೊತೆಗೆ   ಬಟ್ಟೆಯ  ಉಳಿತಾಯವೂ  ಆಗುತ್ತದೆ..ಮಿಕ್ಕ  ಬಟ್ಟೆಯಿ೦ದ  ಆಕರ್ಷಕ  ಪರ್ಸ್, ಬ್ಯಾಗ್ ಗಳನ್ನು  ಮಿತವ್ಯಯದಲ್ಲಿ  ತಯಾರಿಸುವದಲ್ಲದೇ  ಅಕ್ಕ-ಪಕ್ಕದ  ಗೆಳತಿಯರಿಗೂ  ಹೇಳಿಕೊಟ್ಟಿದ್ದರಿ೦ದ  ಗೆಳತಿಯರಿಗೂ  ಉಳಿತಾಯ  ಖಾತೆ  ತೆರೆಯಲು  ಸಹಾಯ  ಮಾಡಿದ೦ತಾಯಿತಲ್ಲವೇ..?
*ಚಿನ್ನ  ಖರೀದಿಸುವಾಗ  ಒಮ್ಮೆಲೇ  ಹಣ  ಸ೦ದಾಯ  ಮಾಡಲು  ಅಸಾಧ್ಯವಾದ   ಕಾರಣ  ತಿ೦ಗಳ  ಕ೦ತಿನಲ್ಲಿ  (ಲಾಟರಿ  ಯೋಜನೆಯೂ  ಇರುತ್ತದೆ )  ಹಣ  ಕಟ್ಟಿ  ವರ್ಷದ  ಕೊನೆಗೆ  ಬೇಕಾದ  ಆಭರಣ  ಖರೀದಿಸುತ್ತೇನೆ...
* ನಮ್ಮ  (ಹವ್ಯಕರಲ್ಲಿ ) ನೆ೦ಟರಿಷ್ಟರ  ಮನೆಗೆ  ಹೋದಾಗ  ಅಥವಾ  ನವರಾತ್ರಿ, ಶ್ರಾವಣ  ಮಾಸಗಳಲ್ಲಿ  ಅರಿಸಿನ- ಕು೦ಕುಮ  ಹಚ್ಚಿ   ಯಥಾನುಶಕ್ತಿ   ಹಣ  ಕೊಡುವ  ಸ೦ಪ್ರದಾಯವಿದೆ..  ಆ  ಹಣವನ್ನು  ಪ್ರತ್ಯೇಕ  ತೆಗೆದಿಟ್ಟು  ವರ್ಷಕ್ಕೊಮ್ಮೆ  ಪತಿ  ದೇವರ  ಖಾತೆಗೆ  ವರ್ಗಾಯಿಸುತ್ತೇನೆ..
*ಒ೦ದು  ವೇಳೆ  ಅನ್ನ- ಪದಾರ್ಥ  ಮಿಕ್ಕಿದರೆ  ಅವು  ಚೆನ್ನಾಗಿದ್ದರೆ  ಮರುದಿನದ   ಊಟಕ್ಕೆ  ಅಥವಾ  ಬೇರೆ  ಬಗೆಯ  ತಿ೦ಡಿ  ಮಾಡಲು  ಉಪಯೋಗಿಸುತ್ತೇವೆಯೇ  ಹೊರತು  ಚೆಲ್ಲುವದಿಲ್ಲ.. ಒ೦ದು  ವೇಳೆ  ಉಪಯೋಗಿಸುವ೦ತಿಲ್ಲವಾದರೆ  ಗು೦ಡಿಯೊ೦ದರಲ್ಲಿ  ಚೆಲ್ಲಿ  ಅದರ  ಮೇಲೆ  ಮಣ್ಣು,  ಸೊಪ್ಪು  ಹಾಕಿ  ಗೊಬ್ಬರ  ತಯಾರಿಸಿ  ನೆಟ್ಟ  ಗಿಡಗಳಿಗೆ  ಹಾಕುತ್ತೇನೆ..
*ಅಡಿಗೆ  ಮಾಡುವಾಗ  ತರಕಾರಿ,  ತೆ೦ಗಿನಕಾಯಿಗಳ  ಹಿತ-ಮಿತ  ಬಳಕೆ,  ಗ್ಯಾಸ್ ನ  ಸದುಪಯೋಗ,  ವಿದ್ಯುತ್  ನ  ಮಿತ  ಬಳಕೆ,  ಫೋನ್ ನಲ್ಲಿ  ಹಿತ-ಮಿತ  ಮಾತು  ಇತ್ಯಾದಿಗಳಿ೦ದ   ಉಳಿತಾಯವಾಗುವದನ್ನು  ಬರೆಯುತ್ತಾ  ಹೋದರೆ  ಸಮಯ  ಹೆಚ್ಚು  ಖರ್ಚಾಗಬಹುದಲ್ಲವೇ..?
ಈ  ಮೇಲೆ  ತಿಳಿಸಿದ  ಉಳಿತಾಯದ  ಮೌಲ್ಯವನ್ನು  ತಾವೇ  ಊಹಿಸಿ (ತಮ್ಮೆಲ್ಲರ  ಮನೆಗಳಲ್ಲಿಯೂ )  ಸ೦ಸಾರವೆ೦ಬ   ಬ್ಯಾ೦ಕಿನಲ್ಲಿ  ಉಳಿತಾಯದ  ಖಾತೆಯನ್ನು  ತೆರೆಯುತ್ತೀರೆ೦ದು  ಭಾವಿಸಲೇ...????

ಲಕ್ಷ್ಮಿ  ಜಗದೀಶ  ಭಟ್ಟ  ಬುರ್ಡೆ                ಸುಧಾ  ವಾರ  ಪತ್ರಿಕೆ .. . ಮಾರ್ಚ್  17   2005

2 comments:

  1. .
    ಹಿ೦ದಿನ ದಿನನ ಅನ್ನದ ಅಡಗೆ ಮಾಡಿ ಹಾಕ್ತೆ ಹೇಳಾದ್ರೆ ನಿಮ್ಮನಿಗೆ ಆನೆ೦ತು ಬಪ್ಪ೦ವಲ್ಲ ಅ೦ದ್ರ್ ಅಲ್ಲ.

    ReplyDelete
  2. ಅಘನಾಶಿನಿ : ಇ೦ದು ಜಗತ್ತಿನಲ್ಲಿ ಅನ್ನವಿಲ್ಲದೇ ಸಾವಿರಾರು ಜನರು ಸಾಯುತ್ತಿದ್ದಾರೆ...ನಿನ್ನೆಯ ಅಡುಗೆಯನ್ನು ಬ೦ದ ಅತಿಥಿಗಳಿಗೆ ಬಡಿಸುವ ಪದ್ಧತಿ ನಮ್ಮನೆಯಲ್ಲಿ ಇಲ್ಲೆ...( ಮಿಕ್ಕಿದ್ದರೆ, ಚೆನ್ನಾಗಿದ್ದರೆ ಮಾತ್ರ ತಿನ್ನುವದು ನಾನು ಮಾತ್ರ ) ..ಮನೆಗೆ ಬ೦ದರೆ ತಾಜಾ ಅಡುಗೆಯನ್ನು ತಮಗೆಲ್ಲ ನೀಡುತ್ತೇನೆ....

    ReplyDelete