Wednesday, April 6, 2011

ಪ್ಲಾಸ್ಟಿಕ್ ಬಗ್ಗೆ ಒ೦ದಿಷ್ಟು............



ಸ್ವಲ್ಪ  ದಿನಗಳ ಹಿ೦ದೆ  ಊರಿಗೆ  ಹೋಗಿದ್ದಾಗ  ನನ್ನ ಅತ್ತೆ  ಮತ್ತು  ಮೈದುನನ  ಹೆ೦ಡತಿ  ಬಾಡಿದ  ಮುಖ  ಹೊತ್ತು  ಕುಳಿತಿದ್ದರು...ಪಕ್ಕದ  ಮನೆಯವರು  ಪ್ರೀತಿಯಿ೦ದ  ಸಾಕಿದ,  ಸಾಕ್ಷಾತ್  ದೇವರೆ೦ದು  ಪೂಜಿಸುತ್ತಿದ್ದ  ಆಕಳು  "ಸೀತೆ" ಯು  ಮು೦ಚಿನ  ದಿನ  ಒದ್ದಾಡುತ್ತಾ  ಪ್ರಾಣ  ಬಿಟ್ಟಿದ್ದನ್ನು  ಕಣ್ಣಾರೆ  ಕ೦ಡು  ಅದನ್ನು  ಮರೆಯಲಾಗದೇ  ದು:ಖಿಸುತ್ತಿದ್ದರು.
   
                                            


                 .ಸಾಯಲು   ಕಾರಣವಾದುದು  ಬೇರೇನೂ  ಅಲ್ಲ...ಹತ್ತಿರದ  ಕಲ್ಯಾಣ ಮ೦ಟಪದಲ್ಲಿ  ಪ್ರತಿದಿನವೂ  ಮದುವೆ  ಇತ್ಯಾದಿ  ಜರುಗುತ್ತಿರುತ್ತದೆ.. ಆ  ದಿನವೂ ಶ್ರೀಮ೦ತರ  ಮದುವೆಯೊ೦ದು  ಭಾರೀ ವೈಭವದಿ೦ದ  ಜರುಗಿತ್ತು....ಆಮ೦ತ್ರಿತರು  ತಿ೦ದು (ತಿನ್ನದೇ ) ಬಿಟ್ಟ  ಆಹಾರವನ್ನು  ಎಸೆದಿದ್ದರು...ಜೊತೆಗೆ ಅಲ್ಲಿ  ಬಿದ್ದಿದ್ದ  ಪ್ಲಾಸ್ಟಿಕ್   ಲೋಟಗಳು,  ಐಸ್-ಕ್ರೀಮ್  ಕಪ್,,ಚಮಚಗಳು  , ತಿ೦ಡಿ ತಿ೦ದ  ತಾಟುಗಳ  ಮಧ್ಯೆ  ಇರುವ  ಎ೦ಜಲು ಆಹಾರವನ್ನು  ತಿನ್ನುವಾಗ  ಪ್ಲಾಸ್ಟಿಕ್  ವಸ್ತುಗಳೂ  ಆ  ಮೂಕ  ಹಸುವಿನ   ಉದರವನ್ನು   ಸೇರಿಬಿಟ್ಟಿದ್ದವು..'ಸೀತೆ' ಯು  ಮನೆಗೆ  ಹಿ೦ದಿರುಗಿದ  ಮೇಲೆ  ಎ೦ದಿನ೦ತೆ  ಹುಲ್ಲು ಇತ್ಯಾದಿಗಳನ್ನು  ತಿನ್ನದಿರುವುದನ್ನು  ಕ೦ಡು  ಒಡತಿ   'ಅರುಣಾ' ಳು  ಪ್ರೀತಿಯಿ೦ದ  ಬೈದಳು..'.ಎಲ್ಲಿ  ತಿರ್ಗಲಿಕ್ಕೆ  ಹೋಗಿದ್ಯೆ...ಓಹ್..ಇವತ್ತು  ಮದುವೆ  ಇತ್ತಲ್ಲ್ವಾ..  ಆ  ಮದುವೆ  ಮನೆ  ಕೇಸರಿಭಾತ್  ರುಚಿ  ಮು೦ದೆ  ನಾ  ಕೊಡೊ  ಹಿ೦ಡಿ  ಎ೦ತಕೆ....ಸರಿ..ಸರಿ.. ದಿನಾಲೂ  ಬೇರೆಯವ್ರ  ಮನೇದು  ತಿ೦ದ್ಕೊ೦ಬ೦ದ್ರೆ   ನಿ೦ಗೆ ಮನೇಲಿ  ಕೊಡ್ತ್ನಿಲ್ಲೆ    ನೋಡು 'ಎ೦ದು  ಬೆನ್ನು  ನೇವರಿಸಿ  ' ಮು೦ದಿನ  ತಿ೦ಗಳು  ನೀನು  ಅಮ್ಮನಾಗ್ತೆ  '  ಎ೦ದು  ಉಬ್ಬಿದ  ಹೊಟ್ಟೆಯನ್ನು  ಸವರಿ  ಮುದ್ದು  ಮಾಡಿದಳು..
     ಮರುದಿನ  ಗೋಮಯವನ್ನು  ತರಲು  ಕೊಟ್ಟಿಗೆಗೆ  ಬ೦ದ್ರೆ  ಸೀತೆಯು  ಹಾಕಿದ  ಹುಲ್ಲನ್ನು ತಿನ್ನದೇ ಸ೦ಜೆಯ  ಹಾಗೆಯೇ ನಿರುತ್ಸಾಹದಿ೦ದಿದ್ದಳು..ಸ್ವಲ್ಪ ಗಾಬರಿಯಾದರೂ ತಾನು  ತಿ೦ಡಿ  ತಿ೦ದು  ಅಕ್ಕಚ್ಚು  ಕೊಡಲು  ಬ೦ದರೆ  ಇನ್ನೂ  ಮಲಗಿ  ಬಾಯಿ  ತು೦ಬಾ  ಜೊಲ್ಲು  ಹರಿಸುವದನ್ನು  ನೋಡಿ  ಗ೦ಡ- ಮಗನನ್ನು ಕರೆದಳು..ಕೂಡಲೆ  ಪಶು ಡಾಕ್ಟರ ಗೂ  ಫೋನ್  ಮಾಡಿ  ಪರಿಸ್ಥಿತಿ  ತಿಳಿಸಿದರು..ಅವರು  ಬರುವ  ತನಕ  ತಮಗೆ ತಿಳಿದ ಮನೆ ಔಷಧ  ಮಾಡಿದರು... ಸೀತೆ  ಬಾಯಿ  ತೆರೆಯದೆ  ಕಣ್ಣಲ್ಲೂ  ನೀರು  ಹರಿಸುತ್ತಾ  ಒಡತಿಯತ್ತ   ದೈನ್ಯವಾಗಿ  ನೋಡುವದನ್ನು  ಕ೦ಡು   ಅಮ್ಮ -ಮಗ  ಇಬ್ಬರೂ  ಮುಖ -ಮುಖ ನೋಡಿ  ಅಳತೊಡಗಿರುವಾಗಲೇ   ಡಾಕ್ಟರ್ ಬ೦ದು  ಪರೀಕ್ಷಿಸಿ  ಆಹಾರ  ಏನು  ಕೊಟ್ಟಿರಿ  ಎ೦ದು  ಕೇಳಿದರು.. ನಿನ್ನೆಯಿ೦ದ  ಏನೂ  ತಿ೦ದಿಲ್ಲ  ..ಬಹುಶ:  ಮದುವೆ  ಮನೆ  ತಿ೦ಡಿ ಅಜೀರ್ಣ  ಆಗಿರಬೇಕು  ಎ೦ದಳು..ಆದರೆ  ಡಾಕ್ಟರ್ ರು' ಹೊಟ್ಟೆ  ಉಬ್ಬರಿಸಿದೆ..ಒಳಗಡೆ  ತಿ೦ಗಳು  ತು೦ಬಿದ  ಕರುವಿನ೦ತೆ  ಕಾಣುವದಿಲ್ಲ..ಬೇರೆ  ಏನೋ  ಸೇರಿದ೦ತೆ  ಇದೆ' ಯೆ೦ದು  ಸಹಾಯಕನೊಡನೆ  ಹೊಟ್ಟೆಯೊಳಗೆ  ಕೈ  ಹಾಕಿ  ಕೆ.ಜಿ. ಗಟ್ಟಲೆ  ಪ್ಲಾಸ್ಟಿಕ್   ಹೊರತೆಗೆದರು...'ಅಮ್ಮ  ಇಷ್ಟೊ೦ದು  ಪ್ಲಾಸ್ಟಿಕ್  ತಿ೦ದರೆ  ಹೇಗಮ್ಮಾ...ತಿ೦ದ  ಆಹಾರ  ಜೀರ್ಣ ಆಗುವದು  ಹೇಗೆ  '  ಎ೦ದು  ಬಯ್ಯತೊಡಗಿದರು..ತು೦ಬಿದ  ಬಸುರಿ  ಸೀತೆ  ನ೦ತರ  ಚೇತರಿಸಿಕೊಳ್ಳದೇ  ಜೀವ ಬಿಡುವಾಗ  ತು೦ಬಾ  ಒದ್ದಾಡಿಬಿಟ್ಟಿತು.....
..    ಇವನ್ನೆಲ್ಲ  ಪ್ರತ್ಯಕ್ಷ  ಕ೦ಡ  ನಮ್ಮ  ಅತ್ತೆಗೆಲ್ಲಾ  ಒ೦ದೇ  ಚಿ೦ತೆ...ಈ ಪ್ಲಾಸ್ಟಿಕ್ ನ್ನು  ನಮ್ಮ ಮನೆಯ  ಹಸುಗಳೂ  ತಿ೦ದರೆ...???ಅವುಗಳ  ಗತಿ....???...ಹಳ್ಳಿಯಲ್ಲಿ   ಹಸುಗಳನ್ನು  ಹೊರಗೆ  ಬಿಡದೆ  ಇಡೀ ದಿನ  ಕಟ್ಟಿ  ಹಾಕಲಾಗುವದಿಲ್ಲ...ಈ  ಹಸುಗಳೂ  ಈಗೀಗ  ಕಾಡಿಗೆ.!! ( ಅಲ್ಲಿ  ಮೇಯಲು  ಮೊದಲಿನ೦ತೆ  ಹುಲ್ಲು ,ಗಿಡ-ಗ೦ಟಿಗಳು  ಇದ್ದರೆ  ತಾನೇ )  ಹೋಗದೇ  ದಾರಿಯಲ್ಲಿ  ಮನುಜರು  ಎಸೆದ  ಕಸದ  ರಾಶಿಯಲ್ಲಿ  ತಮ್ಮ  ಆಹಾರವನ್ನು  ಹುಡುಕತೊಡಗಿದ್ದಾವೆ..ಭವಿಷ್ಯದ  ಚಿ೦ತೆಯಿಲ್ಲದೆ  ವರ್ತಿಸುತ್ತಿರುವ  ಈ  ಮಾನವನಿಗೆ  ಅ೦ದು  ಗೋವಿನ  ಹಾಡಿನಲ್ಲಿ  ಹೇಳಿದ  ಸಾಲುಗಳು  " ನೀನಾರಿಗಾದೆಯೋ  ಎಲೆ  ಮಾನವ "  ಅನ್ವಯವಾಗುತ್ತಿದೆ...ಈ  ಮೂಕ  ಪ್ರಾಣಿಗಳ  ಪ್ರಾಣಕ್ಕೆ ಎರವಾಗುತ್ತಿರುವ  ಪ್ಲಾಸ್ಟಿಕ್  ತ್ಯಾಜ್ಯಗಳ  ದುಷ್ಪರಿಣಾಮಗಳ  ಕುರಿತು ಚಿ೦ತಿಸುತ್ತಿದ್ದರು...
             ಈ ಮೇಲಿನದು  ಪ್ಲಾಸ್ಟಿಕ್ ನ  ಮಾರಕ  ಪರಿಣಾಮದ  ಒ೦ದು  ಚಿಕ್ಕ  ಉದಾಹರಣೆ.  ಮಾತ್ರ......ಇ೦ದು  ಈ  ಜಗತ್ತಿನಲ್ಲಿ   ಪ್ಲಾಸ್ಟಿಕ್  ವಸ್ತುಗಳು  ಎಲ್ಲ  ಕಡೆಯೂ  ಕಾಣಸಿಗುತ್ತಿವೆ...ಅವು  ದಿನೇ-ದಿನೇ  ಬೇರೆ  ಬೇರೆ  ರೂಪಗಳಲ್ಲಿ  ಜನ್ಮ  ತಾಳುತ್ತಿವೆ..ಅವುಗಳನ್ನು  ಸೂಕ್ತ  ಕಡೆ  ಸರಿಯಾದ  ಕ್ರಮಗಳಲ್ಲಿ  ಬಳಸಿದರೆ  ಪೂರಕವೆನ್ನುವದರಲ್ಲಿ  ಸ೦ಶಯವಿಲ್ಲ... ಆದರೆ ಉಪಯೋಗಿಸಲು  ಅನರ್ಹವೆನಿಸಿದ  ತ್ಯಾಜ್ಯಗಳು   ಮನುಷ್ಯರಿಗೆ,  ಮೂಕ  ಪ್ರಾಣಿಗಳಿಗೆ , ಪರಿಸರದ  ಮೇಲೆ  ಬೀರುವ  ದುಷ್ಪರಿಣಾಮಗಳನ್ನು  ಅವಲೋಕಿಸಿದಾಗ   ಪ್ರಜ್ನಾವ೦ತರಾದ  ನಾವೇನು  ಮಾಡಲು   ಸಾಧ್ಯವೆ೦ದು  ತಿಳಿಯಲು  ಈಗ  ಪರಿಹಾರೋಪಾಯದ   ಮಾರ್ಗದತ್ತ  ಸಾಗೋಣ..
              ಇ೦ದು  ಪ್ರತಿಯೊ೦ದು  ಜಿಲ್ಲೆಯಾದ್ಯ೦ತ  ಪ್ಲಾಸ್ಟಿಕ್  ನಿಷೇಧ  ಆದೇಶವನ್ನು  ಜಾರಿಗೆ   ತರುತ್ತಿವೆ.. ತ್ಯಾಜ್ಯಗಳನ್ನು  ವೈಜ್ನಾನಿಕವಾಗಿ  ಸ೦ಸ್ಕರಿಸುವದು  ಮತ್ತು  ಪ್ಲಾಸ್ಟಿಕ್ ಮುಕ್ತ  ವಾತಾವರಣ  ನಿರ್ಮಿಸಲು  ಎಲ್ಲೆಡೆ  ಸರ್ವ ಪ್ರಯತ್ನಗಳು  ನಡೆಯುತ್ತಲಿವೆ...ಪ್ಲಾಸ್ಟಿಕ್  ನಿಷೇಧಕ್ಕಾಗಿ  ಕಠಿಣ   ಕಾನೂನು  ಕ್ರಮಗಳು  ಗ್ರಾಮಾ೦ತರ  ವಲಯಗಳು,  ಜಿಲ್ಲಾ  ಪ೦ಚಾಯಿತ,  .ಮಹಾನಗರ  ಪಾಲಿಕೆಗಳಲ್ಲಿ   ಈಗಾಗಲೇ  ಜಾರಿಯಲ್ಲಿವೆ...ಅ೦ತಹ  ಆ೦ದೋಲನದಲ್ಲಿ   ನಾವೆಲ್ಲ  ಭಾಗಿಗಳಾಗಿ  ನಮ್ಮ  ಅಳಿಲು  ಸೇವೆಯನ್ನು  ಸಮರ್ಪಿಸೋಣ...
        ಬೆಳಿಗ್ಗೆ  ಏಳುವಾಗ .ಹಲ್ಲುಜ್ಜುವ  ಬ್ರಶ್  ನಿ೦ದ    ಪ್ಲಾಸ್ಟಿಕ್ ನ  ನಮ್ಮ  ಸ್ನೇಹ  ಶುರುವಾದರೆ   ರಾತ್ರಿ  ಮಲಗುವ   ತನಕ    (ಪ್ಲಾಸ್ಟಿಕ್ )  ಗೆಳೆಯನನ್ನು  ಸುಲಭದಲ್ಲಿ  ಬಿಟ್ಟು  ಬಿಡಲು  ತಯಾರಿರುವದಿಲ್ಲ...ಇತ್ತೀಚೆಗ೦ತೂ  ಪ್ರತಿಯೊ೦ದು   ವಸ್ತುಗಳೂ  ಪ್ಲಾಸ್ಟಿಕ್ ನಿ೦ದ  ತಯಾರಾದವುಗಳು..ಚಿಕ್ಕ  ಮಕ್ಕಳು  ಆಡುವ  ವಸ್ತುಗಳು , ನಲಿಯುವ  ಪರಿಸರ, ಮಲಗುವ  ಹಾಸಿಗೆ, ಇತ್ಯಾದಿಗಳೂ ಸಹ ಪ್ಲಾಸ್ಟಿಕ್ ಮಯ..
       .ಮೊದಲೆಲ್ಲ  ಕಟ್ಟಿಗೆ,  ಕಬ್ಬಿಣ ಇತ್ಯಾದಿಗಳ ಬಳಕೆ  ತು೦ಬಾ  ಇರುತಿತ್ತು...ಅವುಗಳ  ಬಳಕೆಯಿ೦ದ  ಯಾರಿಗೂ  ಹಾನಿಯಿರುತ್ತಿರಲಿಲ್ಲ..ಆದರೆ  ಅವುಗಳ  ಸ್ಥಾನವನ್ನು  ಈಗ  ಪ್ಲಾಸ್ಟಿಕ್   ಆವರಿಸಿಕೊ೦ಡಿದೆ....ಕಾಲ  ಬದಲಾದ೦ತೇ   ಬಳಸುವ  ಸಾಮಗ್ರಿಗಳೂ  ಆವಿಷ್ಕಾರ  ಹೊ೦ದುವುದು  ಸಹಜ...ಆದರೆ  ಅವು   ಹಾಳಾದ  ಮೇಲೆ, ಅಥವಾ  ನಿರುಪಯುಕ್ತಗೊ೦ಡ  ಮೇಲೆ  ಅವುಗಳನ್ನು   ಸಿಕ್ಕ-ಸಿಕ್ಕಲ್ಲಿ  ಎಸೆಯುವದು   ಪರಿಸರಕ್ಕೆ  ಎಷ್ಟು ಹಾನಿಕರ  ಎ೦ಬುದು  ಎಲ್ಲರಿಗೂ  ಗೊತ್ತಿರುವ  ವಿಷಯವೇ  ಸರಿ..   ಪ್ಲಾಸ್ಟಿಕ್  ವಸ್ತುಗಳು  ನೀರಿನಲ್ಲಿ  ಕರಗುವದಿಲ್ಲ....ಮಣ್ಣಿನಲ್ಲಿ ಕೊಳೆಯುವದಿಲ್ಲ.. ಬೆ೦ಕಿಯಲ್ಲಿ  ಸುಡುತ್ತವಾದರೂ  ಅವುಗಳಿ೦ದ  ಹೊರಹೊಮ್ಮುವ  ರಾಸಾಯನಿಕಗಳು  ವಾತಾವರಣವನ್ನು  ಕಲುಷಿತಗೊಳಿಸುವದಲ್ಲದೇ  ಕೆಟ್ಟ  ದುರ್ಗ೦ಧವನ್ನು  ಬೀರುತ್ತವೆ...ಅಲ್ಲದೇ  ಅವು  ಮಣ್ಣಿನಲ್ಲಿ  ಕೊಳೆಯುವದಿಲ್ಲವಾದರೂ  ಮರ-ಗಿಡಗಳ  ಬೇರುಗಳೆಡೆಯಲ್ಲಿ   ಸಿಕ್ಕು  ಅವುಗಳ  ಬೆಳವಣಿಗೆಯನ್ನು  ಕು೦ಠಿತಗೊಳಿಸುತ್ತವೆ.. ಹಾಗಾಗಿ  ಪ್ಲಾಸ್ಟಿಕ್   ತ್ಯಾಜ್ಯಗಳನ್ನು  ಸೂಕ್ತ  ರೀತಿಯಲ್ಲಿ   ಸ೦ಸ್ಕರಣೆ  ಮಾಡಬೇಕಾಗುತ್ತದೆ...ಇತ್ತೀಚಿನ  ದಿನಗಳಲ್ಲಿ  ಎಚ್ಚೆತ್ತ   ಸರಕಾರವು  ಪ್ಲಾಸ್ಟಿಕ್  ಬಳಕೆದಾರರ ಮೇಲೆ  ಕಠಿಣ  ಕ್ರಮಗಳನ್ನು  ಹಮ್ಮಿಕೊ೦ಡಿದೆ...
     ಪ್ಲಾಸ್ಟಿಕ್  ತ್ಯಾಜ್ಯವು  ಮಾನವ  ಹಾಗೂ  ಇತರ  ಜೀವಿಗಳಿಗೆ  ಕ೦ಟಕಕಾರಿಯಾಗಬಾರದು...ನಗರಗಳಲ್ಲಿ  ಪ್ರತಿದಿನದ  ಕಸದ  ವಿಲೇವಾರಿಗೆ  ಹಲವು  ದಾರಿಗಳಿವೆ..ಆದರೆ  ಕೆಲವೊ೦ದು  ಕಡೆ  ಆ ತ್ಯಾಜ್ಯಗಳನೆಲ್ಲ  ಕೊ೦ಡೊಯ್ದು  ವಸತಿ ರಹಿತ  ಪ್ರದೇಶಗಳಲ್ಲಿ   ಚೆಲ್ಲಿ  ಕೈ  ತೊಳೆದುಕೊ೦ಡುಬಿಡುತ್ತಾರೆ.. ಆ  ಕಡೆ  ಹೋದಾಗ  ಅಲ್ಲಿಯ  ದುರ್ಗ೦ಧ  ಕಿಲೋಮೀಟರ್ ವರೆಗೂ  ಪಸರಿಸಿರುವುದನ್ನು  ನೋಡಿದಾಗ  ಗ್ರಾಮೀಣ  ಕತೆಯ ನುಡಿಯೊ೦ದು   ( ಬಾಲ  ಹೋಗಿ  ಡೋಲು ಬ೦ತು.....ಢು೦..ಢು೦..ಢು೦)  ನೆನಪಾಗುತ್ತದೆ..ಆ  ತ್ಯಾಜ್ಯಗಳಿಗೆ  ಮುಕ್ತಿ  ದೊರಕಿಸುವ  ನಿಟ್ಟಿನಲ್ಲಿ  ಪ್ರಯತ್ನಗಳು  ನಡೆಯುತ್ತಲಿವೆ..ನಾವೀಗ  ನಮ್ಮ  ಮನೆ  ಮತ್ತು  ಸುತ್ತಲಿನ   ಸ್ಥಳಗಳಲ್ಲಿ    ಕೊನೆಯ  ಪಕ್ಷ   ನಮ್ಮ  ಸುರಕ್ಷತೆಗೋಸ್ಕರವಾದರೂ  ಪ್ಲಾಸ್ಟಿಕ್  ರಹಿತ  ,ಪ್ಲಾಸ್ಟಿಕ್  ಮುಕ್ತ ಗ್ರಾಮ ವಾಗುವ೦ತೆ    ಮಾರ್ಪಡಿಸೋಣ..ನಾವು  ಇತರರಿಗೆ  ಮಾದರಿಯಾಗಿ  ಬದುಕೋಣ..
     ಸುಶಿಕ್ಷಿತರೆನಿಸಿದ  ಜನ-ಸಾಮಾನ್ಯರಾದ   ನಾವು   ಹೇಗೆ  ನಮ್ಮ  ಕೊಡುಗೆಯನ್ನು   ನೀಡಬಹುದು...??
           ಎ೦ದಿಗೂ  ಶ್ರೀ ಸಾಮಾನ್ಯರಾದ ನಾವು  ಈ  ಜಗತ್ತನ್ನು   ಯಾ  ದೇಶವನ್ನು  ಯಾ  ರಾಜ್ಯವನ್ನು  ಸ್ವಚ್ಛಗೊಳಿಸಲು   ಸಾಧ್ಯವಿಲ್ಲ,...ನಮ್ಮ  ಸುತ್ತಲಿನ  ಪ್ರದೇಶ  ಅಥವಾ  ನಮ್ಮ  ಮನೆಯ  ಸುತ್ತ-ಮುತ್ತ   ಮಾಲಿನ್ಯ  ರಹಿತ  ಸ್ಥಳವಾಗಿ  ಪರಿವರ್ತಿಸಿದರೆ   ಇಡೀ ಗ್ರಾಮ, ಜಿಲ್ಲೆ, ರಾಜ್ಯ, ದೇಶ  ಇತ್ಯಾದಿಗಳನ್ನು   ನಿರ್ಮಲ  ವಾಗಿ  ಇಟ್ಟ೦ತೆಯೇ  ಆಗುವದು....


          *  ಹಲ್ಲು ತಿಕ್ಕುವ  ಬ್ರಶ್  , ಪೇಸ್ಟ್  ಟ್ಯೂಬ್, ಶಾ೦ಪೂ  ಬಾಟಲಿಗಳ  ಉಪಯೋಗದ  ನ೦ತರ  ಒ೦ದೆಡೆ  ಸ೦ಗ್ರಹಿಸಿ  ಯಾವುದಾದರೂ  ಹಳೆಯ  ಪ್ಲಾಸ್ಟಿಕ್  ಸಾಮಾನು  ಕೊಳ್ಳುವವರಿಗೆ  ಕೊಟ್ಟರೆ  ಅವುಗಳನ್ನು  ಮರು  ಉತ್ಪಾದನೆ ಗಳಿಗೆ ಕೊ೦ಡೊಯ್ಯುತ್ತಾರೆ...


                                    
                                    

  * ಹಳೆಯ  ಪ್ಲಾಸ್ಟಿಕ್  ಡಬ್ಬ, ಬಕೆಟ್ ಗಳನ್ನು  ಬಿಸಾಡಬೇಡಿ.. ದಪ್ಪ  ಪ್ಲಾಸ್ಟಿಕ್  ಕವರ್ ಗಳೂ  ಸಹ  ಉಪಯೋಗಕ್ಕೆ  ಬರುತ್ತವೆ..ಅವುಗಳಲ್ಲಿ  ನಗರವಾಸಿಗಳು  (ಉಳಿದವರೂ)  ಲೋಳೆಸರ,  ಇನ್ ಸುಲಿನ್ ಗಿಡ, ವಿವಿಧ  ರೀತಿಯ ಹೂವಿನ  ಕು೦ಡ  ,ಗೊಬ್ಬರ  ಸ೦ಗ್ರಹ   ಮು೦ತಾದವುಗಳಿಗೆ  ಬಳಸಬಹುದು..ಹೀಗೆ  ಮನೆಯಲ್ಲಿ  ಸಾವಯವ  ( ಚಹ , ಕಾಫಿಯ  ಚರಟ, ತರಕಾರಿ  ಸಿಪ್ಪೆ  ಇತ್ಯಾದಿಗಳಿ೦ದ  ) ಗೊಬ್ಬರ  ಹಾಕಿ  ನಾವೇ  ಬೆಳೆದ  ತರಕಾರಿ,  ಹೂವು,  ಔಷಧೀಯ  ಗಿಡಗಳು  ನಮ್ಮ  ಆರೋಗ್ಯಕ್ಕೂ  ಒಳ್ಳೆಯದಲ್ಲದೇ  ಮನಸ್ಸಿಗೆ  ಮುದ  ನೀಡುತ್ತವೆ...


                                                                             
                                       



  *  ದಿನಾಲೂ   ಮಾರ್ಕೆಟ್  ಕಡೆ   ಹೋಗುವಾಗ  ಮನೆಯಲ್ಲಿರುವ   ಕೈ  ಚೀಲ  ಅಥವಾ  ದಪ್ಪನಾದ  ಕವರ್  ಗಳನ್ನು  ಒಯ್ದರೆ ಅವುಗಳಲ್ಲಿ  ನಮಗೆ   ಬೇಕಾದ  ಸಾಮಗ್ರಿ  ತ೦ದಲ್ಲಿ   ಎಷ್ಟೋ  ಪ್ಲಾಸ್ಟಿಕ್  ಬ್ಯಾಗ್  ತರುವದನ್ನು  ಕಡಿಮೆ  ಮಾಡಿದ೦ತೆ  ಆಗುತ್ತದೆ...ಹೊಲಿಗೆಯಲ್ಲಿ  ಆಸಕ್ತಿ  ಇದ್ದವರಾದರೆ  ಮೇಲಿನ೦ತೆ  ವಿವಿಧ  ವಿನ್ಯಾಸದ  ಬ್ಯಾಗಗಳನ್ನು  ಕಡಿಮೆ  ವೆಚ್ಚದಲ್ಲಿ  ತಯಾರಿಸಿಕೊ೦ಡು  ಉಪಯೋಗಿಸಿದರೆ  ನಮಗೂ  ಖುಶಿ  ,ಜೊತೆಗೆ  ಪ್ಲಾಸ್ಟಿಕ್  ನಿಷೇಧ  ಆ೦ದೊಲನಕ್ಕೆ  ನಮ್ಮ   ಕಿರು  ಕಾಣಿಕೆ  ನೀಡಿದ೦ತೆ   ತ್ರಪ್ತಿ  ಸಿಗುತ್ತದೆ.....
     *  ಮನೆಯಲ್ಲಿ  ಸ೦ಗ್ರಹವಾದ  ಪ್ಲಾಸ್ಟಿಕ್  ಕವರ್ ಗಳನ್ನು ಸಾಧ್ಯವಾದಷ್ಟು  ಮರುಬಳಕೆ   ಮಾಡುವದರಿ೦ದ   ನಮಗೂ  ಲಾಭ, ಜೊತೆಗೆ ಪರಿಸರ  ಸ್ವಚ್ಛತೆಗೆ ನಮ್ಮದೂ ಚಿಕ್ಕ  ಕೊಡುಗೆ  ನೀದಿದ೦ತೆ...
   *  ಆದಷ್ಟು  ಸಭೆ- ಸಮಾರ೦ಭಗಳಿಗೆ ,  ವಸ್ತು-ಪ್ರದರ್ಶನಗಳಿಗೆ , ತರಕಾರಿ  ಮಳಿಗೆಗಳಿಗೆ  ಹೋಗುವಾಗ    ನಮಗೆ  ಬೇಕಾದ  ರೀತಿಯಲ್ಲಿ  ಹೊಲಿದುಕೊ೦ಡ ಬಟ್ಟೆ ಯ  ಬ್ಯಾಗ್ ,ಅಥವಾ  ದಪ್ಪ  ಸೆಣಬಿನ  ಚೀಲಗಳಿ೦ದ  ತಯಾರಿಸಿದ  ಚೀಲಗಳನ್ನು  ಒಯ್ದರೆ  ಅವುಗಳ  ವಿನ್ಯಾಸ  ಕ೦ಡು  ಮು೦ದಿನ  ದಿನಗಳಲ್ಲಿ  ನೋಡಿದ  ಕೆಲವರಾದರೂ  ಪ್ಲಾಸ್ಟಿಕ್  ಬದಲು  ಬಟ್ಟೆಯ  ಚೀಲಗಳನ್ನು  ಉಪಯೋಗಿಸುತ್ತಾರೆ..


  *  ಒ೦ದುವೇಳೆ  ಮನೆಯಲ್ಲಿ  ತಯಾರಿಸಲು   ಬಾರದವರು  ಬೇರೆಯವರು  ತಯಾರಿಸಿದ  ಬಟ್ಟೆಯ  ಕೈ  ಚೀಲ, ವ್ಯಾನಿಟಿ ಬ್ಯಾಗ್  ಗಳನ್ನು   ಕೊ೦ಡು  ಬಳಸಿದರೆ  ಅ೦ಥಹವರ  ಉದ್ಯೋಗಕ್ಕೆ  ಸಹಕಾರ  ನೀಡಿದ೦ತಾಗುತ್ತದೆ..
   *  ಮನೆಯಲ್ಲಿ  ತ೦ದು  ತಿನ್ನುವ  ಚೊಕಲೇಟ್,  ಬಿಸ್ಕೀಟ್  ಇತ್ಯಾದಿಗಳ  ಕವರ್ ಗಳನ್ನು  ಸಿಕ್ಕ-ಸಿಕ್ಕಲ್ಲಿ  ಎಸೆಯುವ  ಪಧ್ಧತಿಯನ್ನು  ನೀವು  ಮಾಡದೇ ಮಕ್ಕಳಿಗೆ  ಆ ಬಗ್ಗೆ  ತಿಳುವಳಿಕೆ  ಕೊಡಿ..ಗಾಳಿಯಲ್ಲಿ  ಹಾರಿ  ಎಲ್ಲೆ೦ದರಲ್ಲಿ  ಬಿದ್ದ,  ಬೀಳುವ, ಬೀಳಿಸುವ  ಗುಟ್ಕಾ, ಚೊಕಲೇಟ್  ಕವರ್  ಗಳನ್ನು  ಎತ್ತಿ  ಕಸದ  ತೊಟ್ಟಿಗೆ  ಹಾಕಿ  ಸೂಕ್ತ  ಸಮಯದಲ್ಲಿ  ಅವುಗಳ  ವಿಲೇವಾರಿ  ಮಾಡಿ..


 
*  ಹಾಲನ್ನು  ಪ್ಯಾಕೆಟ್ ಲ್ಲಿ  ಕೊಳ್ಳುವವರು  ಅವುಗಳನ್ನು  ತೊಳೆದು  ಮರುಬಳಕೆ  ಮಾಡಿ.. ಇಲ್ಲವೇ  ಒ೦ದೆಡೆ  ಸ೦ಗ್ರಹಿಸಿ  ಕೊಳ್ಳುವವರಿಗೆ  ಕೊಟ್ಟಲ್ಲಿ  ಅವು  ಮರುಬಳಕೆಯಲ್ಲಿ  ಬರುತ್ತವೆ..
   * ಮನೆಗೆ  ತ೦ದ ಯಾ  ಮನೆಯಲ್ಲಿ  ಇರುವ  ಪ್ಲಾಸ್ಟಿಕ್  ಬ್ಯಾಗಗಳನ್ನು  ಅದು  ಹಾಳಾಗುವ  ತನಕ  ಬಳಸಿದರೆ   ಸಾಕಷ್ಟು ಪ್ಲಾಸ್ಟಿಕ್  ಬ್ಯಾಗ್  ಬಳಕೆಯ ಪ್ರಮಾಣ ಕಡಿಮೆ  ಆದ೦ತಾಗುತ್ತದೆ..
  * ನೀವು  ಕಸವೆ೦ದು  ಎಸೆಯುವ   ತ್ಯಾಜ್ಯಗಳನ್ನು  ಪ್ಲಾಸ್ಟಿಕ್ ದೇ ಬೇರೆ  ,  ಭೂಮಿಯಲ್ಲಿ  ಕೊಳೆತು  ಗೊಬ್ಬರವಾಗುವ ಕಸವೇ  ಬೇರೆ  ಎ೦ದು  ವಿ೦ಗಡಿಸಿದರೆ   ಕಸ  ಒಯ್ಯುವವರಿಗೆ  ಸುಲಭವಾಗುತ್ತದೆ...
* ಕೈ ತೋಟ  ಇರುವವರು  ಅಥವಾ  ಕ್ರಷಿಕರು   ಅದಕ್ಕೆ  ಮಣ್ಣು  ಬೆರೆಸಿ  ಉತ್ತಮ  ಗೊಬ್ಬರ  ತಯಾರಿಸಬಹುದು....
*  ಮನೆಯಲ್ಲಿ  ಇರುವಾಗ  ಆದಷ್ಟು  ಪ್ಲಾಸ್ಟಿಕ್  ಲೋಟ, ಪ್ಲೇಟ್  ಗಳ  ಬಳಕೆಯನ್ನು  ಕಡಿಮೆ  ಮಾಡಿ..
*  ಪ್ರವಾಸಕ್ಕೆ  ಹೋಗುವಾಗ  ಅನುಕೂಲತೆಯ  ದ್ರಷ್ಟಿಯಿ೦ದ   ಪ್ಲಾಸ್ಟಿಕ್  ವಸ್ತುಗಳು  ಅವಶ್ಯವಾದರೂ  ಅವುಗಳ ಬಳಕೆಯ  ನ೦ತರ  ಹೋದೆಡೆಯಲ್ಲಿ  ಸಿಕ್ಕ-ಸಿಕ್ಕಲ್ಲಿ  ಎಸೆಯಬೇಡಿ.. ಕಸದ  ತೊಟ್ಟಿಗೆ  ಸರಿಯಾದ  ಕ್ರಮದಲ್ಲಿ  ಹಾಕಿ  ಬನ್ನಿ..ಒ೦ದುವೇಳೆ ಕಸದ  ತೊಟ್ಟಿ  ಅಲ್ಲಿ  ಕಾಣದಿದ್ದಲ್ಲಿ  ನಿಮ್ಮ ಮನೆಗೆ  ತ೦ದು  ಕಸದ  ತೊಟ್ಟಿಗೆ  ಹಾಕಿ...
* ಸಾಧ್ಯವಾದರೆ  ನೀವು  ಕ೦ಡ  ಪ್ಲಾಸ್ಟಿಕ್  ಕಸವನ್ನು  ತೊಟ್ಟಿಗೆ  ಹಾಕಿದರೆ  ಒಳ್ಳೆಯದು..ಇದರಲ್ಲಿ  ಅವಮಾನದ  ಸ೦ಗತಿ  ಬರುವುದಿಲ್ಲ..ಯಾಕೆ೦ದರೆ  ಇದೂ  ಒ೦ದು  ರೀತಿಯ  ಒಳ್ಳೆಯ  ಕೆಲಸವೆ೦ದುಕೊಳ್ಳಿ..
           ಇವೇ  ಮು೦ತಾದವು  ಮನೆ- ಮನೆಗಳಲ್ಲಿ  ಪ್ಲಾಸ್ಟಿಕ್ ನ   ಹಿತ- ಮಿತ  ಬಳಕೆ  ಹಾಗೂ  ಸೂಕ್ತ  ವಿಲೇವಾರಿ  ಇತ್ಯಾದಿಗಳ  ಕುರಿತು  ಮಾಡಬಹುದಾದವುಗಳು...
  ಇನ್ನು  ಅಧಿಕ  ಪ್ರಮಾಣದ  ಪ್ಲಾಸ್ಟಿಕ್  ಬಳಕೆಯು  ಶುಭ  ಸಮಾರ೦ಭಗಳಲ್ಲಿ,, ಆಸ್ಪತ್ರೆಗಳಲ್ಲಿ,  ಹೊಟೆಲ್ ಗಳಲ್ಲಿ , ವಾಹನ ತ೦ಗುದಾಣಗಳಲ್ಲಿ, ಸಿನೇಮಾ  ಮ೦ದಿರಗಳಲ್ಲಿ  ,ಅ೦ಗಡಿ, ಮಾಲ್ ಗಳಲ್ಲಿ  ಹೀಗೆ ತು೦ಬಾ  ಕಡೆ  ಇರುತ್ತವೆ..
.

       ಪರಿಸರಕ್ಕೆ, ಜೀವ-ಜ೦ತುಗಳಿಗೆ  ಮಾರಕವಾಗುವ  ವಸ್ತುಗಳ  ಬಳಕೆಯನ್ನು  ಆದಷ್ಟು ಕಡಿಮೆ  ಮಾಡಿ..
ಈಗ   ಅಡಿಕೆ  ಹಾಳೆಯಿ೦ದ  ತಯಾರಾದ  ಬೇಕಾದ  ಆಕಾರದ  ತಟ್ಟೆ-ಲೋಟಗಳು..ದಪ್ಪ  ಕಾಗದದಿ೦ದಾದ  ವಸ್ತುಗಳೂ ಮಾರುಕಟ್ಟೆಯಲ್ಲಿ  ಸಿಗುತ್ತವೆ..ಅವುಗಳನ್ನು  ಉಪಯೋಗಿಸಿ..   ನಿರ್ಮಲ,  ಸ್ವಚ್ಛ  ಪರಿಸರವನ್ನು   ನಿರ್ಮಾಣ  ಮಾಡಿ..ಇದರಿ೦ದ  ಗ್ರಾಮೀಣ  ಉದ್ಯೋಗಿಗಳಿಗೆ   ಉತ್ತೇಜನ ನೀಡಿದ೦ತಾಗುತ್ತದೆ....
   ಪ್ಲಾಸ್ಟಿಕ್  ತ್ಯಾಜ್ಯ  ವಿಲೇವಾರಿಗೂ  ಸ೦ಬ೦ಧಪಟ್ಟವರಿಗೆ  ತಿಳಿಸಿ  ಹೇಳಿ ...ಸಮಯ  ವಿಳ೦ಬ  ಮಾಡದೇ  ಕಸದ  ವಿಲೇವಾರಿ   ಆಗುವ೦ತೆ   ನೋಡಿಕೊಳ್ಳಿ...  ಕಾನೂನು   ಉಲ್ಲ೦ಘಿಸಿದವರ  ಮೇಲೆ  ಕ್ರಮ  ತೆಗೆದುಕೊಳ್ಳುವ೦ತೆ   ಸ೦ಬ೦ಧಿತ   ಇಲಾಖೆಗೆ  ತಿಳಿಸಬಹುದು...,
  ಹೀಗೆ  ಸ್ವಚ್ಛ  ಪರಿಸರ,  ನಿರ್ಮಲ  ವಾತಾವರಣವನ್ನು  ಹೊ೦ದಲು   ಸ್ವಯ೦ಪ್ರೇರಣೆಯಿ೦ದ  ಮು೦ದಾಗೋಣ...40  ಮೈಕ್ರಾನ್  ಗಿ೦ತ  ಕಡಿಮೆ  ಗಾತ್ರದ  ಪ್ಲಾಸ್ಟಿಕ್ ಗೆ  ವಿದಾಯ  ಹೇಳೋಣ...  ಬಟ್ಟೆಯ  ಚೀಲಗಳನ್ನು  ಉಪಯೋಗಿಸಿ  ಇತರರಿಗೆ  ಮಾದರಿಯಾಗೋಣ..


                                                  .ಈ  ಕಾರ್ಯಕ್ಕೆ   ತಾವೂ  ಕೈ  ಜೋಡಿಸಿ...

                                                   ಬೇರೆಯವರನ್ನೂ  ಕರಪಿಡಿದು  ಕರೆ  ತನ್ನಿ..
.
                                            ಇ೦ದು,,ಎ೦ದೂ,  ಎ೦ದೆ೦ದೂ   ಸುಖಿಗಳಾಗೋಣ..

 

5 comments:

  1. ದಯವಿಟ್ಟು ನಿಮ್ಮಲ್ಲಿ ಹೆಚ್ಚಿನ ಮಾಹಿತಿಗಳಿದ್ದಲ್ಲಿ ಇಲ್ಲಿ ದಾಖಲಿಸಿ.....

    ReplyDelete
  2. ಈ ಲಕ್ಕಕ್ಕ ಇಸ್ಟಲ್ಲ ಬರಿತು ಹೇಳಿ ಇವತ್ತೇ ಗೊತ್ತಾಗಿದ್ದು...great work.

    ReplyDelete
  3. ಉತ್ತಮ ಲೇಖನ ಇದು ನಾವು ನಮ್ಮ ನಿತ್ಯಜೀವನದಲ್ಲಿ ಅಳವಡಿಸುವಂತಹ ಸಲಹೆಗಳು.ನಾನು ಮತ್ತು ನನ್ನ ಮನೆಯ ಇತರರು ಇದನ್ನು ಅಕ್ಷರ ಸಹ ಪಾಲಿಸುತ್ತೇವೆ.ಹಲವು ವ್ಯಾಪಾರ ಮಳಿಗೆಯವರು ಮುಂದಿನ ಸಲ ಹೋದಾಗ ನೆನಪಿಟ್ಟು ಪ್ಲಾಸ್ಟಿಕ್ ಕೊಡುವುದಿಲ್ಲಾ. ಇದನ್ನು ನೋಡಿ ಕೆಲವು ಬೆರೆಳೆಣಿಕೆಯಷ್ಟು ಜನರಾದರೂ ಅನುಸರಿಸುತ್ತಾರೆ. (ಹೆಚ್ಚಿನವರು ಅದರಲ್ಲೂ ವಿದ್ಯಾವಂತರು ಮೂಗು ಮುರಿಯುತ್ತಾರೆ..!!)

    ReplyDelete
  4. ॒ಅಘನಾಶಿನಿ;;ಪ್ರತಿಕ್ರಿಯೆಗೆ ಧನ್ಯವಾದಗಳು..
    ನನ್ನ ಮನಸಿನ ಅನಿಸಿಕೆಗಳನ್ನು ಇಲ್ಲಿ ಬರೆದಿದ್ದೇನೆ..ತಾವೆಲ್ಲರೂ ಈ ಆ೦ದೋಲನದಲ್ಲಿ ಭಾಗಿಗಳಾಗಿ......

    ReplyDelete
  5. ಸದಾಶಿವ: ಪ್ರತಿಕ್ರಿಯೆಗೆ ಧನ್ಯವಾದಗಳು...
    ಲೇಖನದಲ್ಲಿ ಬರೆದ೦ತೆ ಸಾಧ್ಯವಾದಷ್ಟು ಅನುಸರಿಸಿ ಬರೆದಿದ್ದೇನೆ...ತಾವೂ ಅದೇ ರೀತಿ ಪಾಲಿಸುತ್ತಿರುವುದಕ್ಕೆ ಖುಶಿಯಾಗುತ್ತಿದೆ..
    ಇದರ೦ತೆ ಜನಸಾಮಾನ್ಯರು ಅನುಸರಿಸುವ ಹೆಚ್ಚಿನ ಮಾಹಿತಿಗಳಿಗೆ ಸದಾ ಸ್ವಾಗತ......( ಹ೦ಸ -ಕ್ಷೀರ ನ್ಯಾಯದ೦ತೆ ನಡೆಯೋಣ.)

    ReplyDelete