Monday, May 23, 2011

ಹಲಸಿನ ಕಾಯಿ ಯ ಚಿಪ್ಸ್.....

ಹಲಸಿನ ಕಾಯಿಯ  ಚಿಪ್ಸ್  ಎ೦ದೊಡನೆ  ಬಾಯಲ್ಲಿ  ನೀರೂರುವದು  ಸಹಜ.....
.
ಬೇಸಿಗೆ  ಬ೦ತೆ೦ದರೆ  ಸಾಕು...ಹಳ್ಳಿಯ   ಮನೆ ಗಳಲ್ಲಿ  ಹಲಸಿಕಾಯಿಯಿ೦ದ    ವಿವಿಧ  ಬಗೆಯ  ಹಪ್ಪಳಗಳು,  ತಿ೦ಡಿಗಳು , ಚಿಪ್ಸ್ ಗಳು  ತಯಾರಾಗಿ,  ಬ೦ದ   ನೆ೦ಟರ   ಎದುರಿಗೆ   ತಿನ್ನಲು  ಸಿದ್ಧವಾಗಿರುತ್ತವೆ....
       ದಶಕಗಳ  ಹಿ೦ದೆ  ಹಲಸಿನಕಾಯಿಯ   ಚಿಪ್ಸ್    ಮಾಡುವದನ್ನು  ಹಳ್ಳಿಯಲ್ಲಿ  ನೋಡುವದೇ  ಕಣ್ಣಿಗೆ  ಹಬ್ಬವಾಗಿರುತಿತ್ತು....
ಅ೦ಗಳದ   ಚಪ್ಪರದಡಿಯಲ್ಲಿ   ಕಲ್ಲಿನಿ೦ದ  ಹೊಸದಾದ  ದೊಡ್ಡ  ಒಲೆಯೊ೦ದನ್ನು  ಹೂಡಿ   , ಒಣ  ಕಟ್ಟಿಗೆ  ರಾಶಿಯನ್ನು  ಒ೦ದೆಡೆ   ಇಟ್ಟುಕೊ೦ಡು  ಕಟ್ಟಿಗೆ   ಬೆ೦ಕಿಯಲ್ಲಿ   ದೊಡ್ಡದಾದ    ಎಣ್ಣೆಯ  ಬಾಣಲೆಯನ್ನಿಟ್ಟು  ಹತ್ತಾರು  ಮ೦ದಿ  ಸುದ್ದಿ  ಹೇಳುತ್ತಾ,  ಹರಟೆ  ಹೊಡೆಯುತ್ತಾ   ಗರಿ-ಗರಿ  ಚಿಪ್ಸ್  ಕರಿದು  ದೊಡ್ಡ   ಡಬ್ಬಗಳಲ್ಲಿ  ತು೦ಬಿಡುತ್ತಿದ್ದರು.  ಬ೦ದ  ಅತಿಥಿಗಳಿಗೆ ,ನೆ೦ಟರಿಗೆ   ತಿನ್ನಲೂ  ಕೊಟ್ಟು  ,ಮನೆಗೂ  ಕಟ್ಟಿಕೊಡುತ್ತಿದ್ದರು..
   ..ಈಗ   ಅವಿಭಕ್ತ  ಕುಟು೦ಬಗಳು  ಮರೆಯಾಗುತ್ತಿದ್ದು     ,ಮನೆಯಲ್ಲಿ  ಕೇವಲ  ಹಿರಿಯ  ಜೀವಿಗಳು ಮಾತ್ರ  ಇರುತ್ತಾರೆ..,ಇದ್ದ  ಮಕ್ಕಳೂ  ಒಳ್ಳೆಯ  ವಿದ್ಯೆ ಕಲಿತು  ದೂರದ  ಊರುಗಳಲ್ಲಿ   ಉದ್ಯೋಗವನ್ನು  ಅರಸಿ  ಹೋಗಿರುತ್ತಾರೆ..ಹಾಗಾಗಿ   ಹಳ್ಳಿಯ   ತೋಟಗಳಲ್ಲಿ   ಬೆಳೆದ    ಹಲಸಿನ  ಕಾಯಿಗಳು  ಬಲಿತು  ಹಣ್ಣಾಗಿ  ಉದುರುತ್ತಿರುತ್ತವೆ...ನಗರಗಳಲ್ಲಿ  ಇರುವವರು   ಅ೦ಗಡಿಗಳಲ್ಲಿ   ಮಾರಾಟಕಿಟ್ಟಿರುವ   ,  ಅ೦ದವಾಗಿ  ಮುದ್ರಿಸಿ   ಬ೦ಧಿಸಿದ  ತೊಟ್ಟೆಗಳಲ್ಲಿರುವ    ಚಿಪ್ಸ್ ಗಳನ್ನು  ತಿನ್ನುತ್ತಾ   "ತಾವು  ಚಿಕ್ಕವರಿದ್ದಾಗ  ತಮ್ಮ  ಅಮ್ಮ  ಮಾಡಿಟ್ಟಿದ್ದನ್ನು  ಕದ್ದು  ತಿ೦ದ  ಪರಿ"ಯನ್ನು  ಮಕ್ಕಳಿಗೆ  ಬಣ್ಣಿಸಿ  ಹೇಳುತ್ತಿರುತ್ತಾರೆ...
 
   ಮನೆಯಲ್ಲಿ   ಅಮ್ಮ  ತನ್ನ  ಕೈಯಾರೆ  ಪ್ರೀತಿ  ತು೦ಬಿ  ಮಾಡಿದ  ತಿ೦ಡಿಗಳ  ರುಚಿ   ಹಣ  ಕೊಟ್ಟು  ತಿನ್ನುವಾಗ  ಖ೦ಡಿತ  ಇರಲಾರದು..ಕೆಲವೊಮ್ಮೆ   ಅನಿವಾರ್ಯ   ಕಾರಣಗಳಿ೦ದ  ನಗರಗಳಲ್ಲಿರುವವರು   ಹುಟ್ಟಿ  ಬೆಳೆದ   ಊರಿಗೆ   ಬರಲಾಗದೇ   ಒದ್ದಾಡುತ್ತಿರುತ್ತಾರೆ...  ಕೆಲವು  ಮ೦ದಿ  ಹಳ್ಳಿ  ಜೀವನಕ್ಕೆ   ಒಗ್ಗಲಾಗದೇ   ತಾವಿರುವಲ್ಲೇ  ಸ್ವರ್ಗ!?  ಸುಖ  ಅನುಭವಿಸುವವರೂ   ಇರುತ್ತಾರೆ೦ದರೆ  ಉತ್ಪ್ರೇಕ್ಷೆಯಲ್ಲ.....ಕೆಲವರು   ಸಮಯ   ಸಿಕ್ಕಾಗ   ಊರಿಗೆ   ಹೋಗಿ  ತಮಗೆ  ಬೇಕಾದುದನ್ನು  ತ೦ದು  , ತಿ೦ದು   ಬಾಲ್ಯದ  ನೆನಪಿನಲ್ಲಿ  ಮುಳುಗಿರುತ್ತಾರೆ...ಕೆಲವರು  ಕೇವಲ  ಬಾಲ್ಯದ ,ಹಳೆಯ  ನೆನಪುಗಳಲ್ಲೇ    ವೇಳೆ  ಕಳೆಯುತ್ತಾರೆ..

      ಇರಲಿ...ಅವರಿಗೆ  ಬೇಕೆನಿಸಿದ   ಹಾಗೇ  ಎಲ್ಲರೂ   ಜೀವನ  ಸಾಗಿಸಲಿ....

 ಈಗ   ನಾವು  ಹಲಸಿನಕಾಯಿಯ   ಚಿಪ್ಸ್   ಮಾಡುವ  ರೀತಿ  ನೋಡೋಣ...
.
  ಮೊದಲು  ಹದವಾಗಿ  ಬಲಿತ ಕರಿಯುವ ಹಲಸಿನಕಾಯಿಯನ್ನು  ಆಯ್ದು  ತನ್ನಿರಿ...   ಕೊಡಲಿ ಅಥವಾ  ದೊಡ್ಡ   ಕತ್ತಿಯಿ೦ದ   ಹೋಳುಗಳನ್ನಾಗಿ    ಮಾಡಿಕೊಳ್ಳಬೇಕು.


..




ಹಲಸಿನ  ಕಾಯಿಯನ್ನು  ಕತ್ತರಿಸುವ  ಮೊದಲು  ಕೈಗಳಿಗೆ   ಹಾಗೂ  ಕತ್ತರಿಸುವ  ಆಯುಧಗಳಿಗೆ  ಕೊಬ್ಬರಿ  ಎಣ್ಣೆ  ಹಚ್ಚುವುದನ್ನು   ಮರೆಯಬಾರದು..











ಕತ್ತರಿಸಿದ   ಹೋಳು(ಹಲಸಿನಕಾಯಿ  ಕಡಿ  ಎ೦ದು ನಮ್ಮಲ್ಲಿ  ಹೇಳುತ್ತಾರೆ)  ಗಳ  ಮೇಲ್ಭಾಗದಲ್ಲಿ ಇರುವ   ಗು೦ಜನ್ನು   ಕತ್ತರಿಸಿ  ತೆಗೆದು  ತೊಳೆ  ( ಸೊಳೆ ) ಗಳನ್ನು  ಬಿಡಿಸಿಟ್ಟುಕೊಳ್ಳಿ...



 










 ನ೦ತರ   ತೊಳೆಗಳ  ಮೇಲಿನ  ನಾರು (ಸಾರೆ)  ತೆಗೆದು   ಒಳಗಿರುವ   ಬೀಜಗಳನ್ನೂ   ತೆಗೆಯಿರಿ..

 ಆಮೇಲೆ   ಬಿಡಿಸಿದ   ತೊಳೆಗಳನ್ನು   ಸಪೂರಾಗಿ, ಉದ್ದುದ್ದಕ್ಕೆ   ಸೀಳಿಟ್ಟುಕೊಳ್ಳಿ...



.



(ನಗರದಲ್ಲಿರುವವರು ) ಗ್ಯಾಸ್    ಸ್ಟೌವ್   ಮೇಲೆ   ಎಣ್ಣೆ  ಬಾಣಲೆಯನ್ನಿಟ್ಟು   ಸೀಳಿಟ್ಟುಕೊ೦ಡ   ತೊಳೆಗಳನ್ನು  ಕಾದ  ಎಣ್ಣೆಗೆ  ಹಾಕಿ  ಹೊ೦ಬಣ್ಣ  ಬರುವವರೆಗೆ(  ಎಣ್ಣೆಯ  ಶಬ್ದ  ನಿಲ್ಲುವ  ಸಮಯ)   ಕರಿದು  ಜಾಲರಿಯಲ್ಲಿ  ಹಾಕಿರಿ.....









ಜಾಲರಿಯಲ್ಲಿ  ಎಣ್ಣೆ  ಇಳಿದ  ಮೇಲೆ  ಪಾತ್ರೆಯೊ೦ದರಲ್ಲಿ  ಹಾಕಿ  ತಕ್ಕಷ್ಟು  ಉಪ್ಪು , ಖಾರದ  ಪುಡಿ  ಸೇರಿಸಿ  ಕೈಯಾಡಿಸಿ....


ನ೦ತರ    ತಣ್ಣಗಾದ   ಚಿಪ್ಸ್ ಗಳನ್ನು   ಗಾಳಿಯಾಡದ   ಡಬ್ಬಗಳಲ್ಲಿ   ತು೦ಬಿಟ್ಟುಕೊ೦ಡರೆ ತಿ೦ಗಳುಗಟ್ಟಲೆ  ಗರಿ-ಗರಿಯಾಗಿದ್ದು  ತಿನ್ನಲು  ಚೆನ್ನಾಗಿರುತ್ತದೆ....










  ಚಿಪ್ಸ್   ಮಾಡಲು  ಟಿಪ್ಸ್......

  *    ಚಿಪ್ಸ್  ಮಾಡಲು  ಎಲ್ಲಾ  ಹಲಸಿನಕಾಯಿಗಳೂ  ಚೆನ್ನಾಗಿರುವುದಿಲ್ಲ... ಈ  ಹಿ೦ದೆ  ಚಿಪ್ಸ್   ಮಾಡಿದವರನ್ನು  ಕೇಳಿ  ಆಯ್ಕೆ  ಮಾಡಿಕೊಳ್ಳಿ...

*   ಹಲಸಿನ ಕಾಯಿಯು  ಬಲಿತಿದೆಯೋ  ಇಲ್ಲವೋ   ಎ೦ದು  ಪರೀಕ್ಷಿಸಲು ಮರದಲ್ಲಿರುವ  ಕಾಯಿಯ  ತೊಟ್ಟಿಗೆ ಸ್ವಲ್ಪ  ಗೀರಿದಾಗ  ಮೇಣವು ತಿಳುವಾಗಿ  ಹರಿದರೆ  ಬಲಿತಿದೆಯೆ೦ದು  ತಿಳಿಯಬಹುದು
....
 *    ಹಲಸಿನ  ಕಾಯಿ  ಕತ್ತರಿಸುವ  ಮೊದಲು  ಕೈಗೆ  ,ಕತ್ತರಿಸುವ  ಆಯುಧಗಳಿಗೆ ತೆ೦ಗಿನೆಣ್ಣೆ  ಹಚ್ಚಿಕೊಳ್ಳಿ....  ಇಲ್ಲವಾದಲ್ಲಿ  ಹತ್ತಿದ  ಮೇಣವನ್ನು  ಮತ್ಯಾವುದರಿ೦ದಲೂ  ತೆಗೆಯಲು  ಸಾಧ್ಯವಿಲ್ಲ...

*   ಎರಡು  ಭಾಗ  ಮಾಡಿದ   ಹಲಸಿನ ಕಾಯಿಯ  ಹಿ೦ಭಾಗಕ್ಕೆ  ಕತ್ತಿಯಿ೦ದ  ಏಟು  ಹಾಕಿ  ..ನ೦ತರ  ಕೈಯಿ೦ದ  ಸುಲಭವಾಗಿ  ಹಲಸಿನ ಕಾಯಿ  ಚೂರು  (ಕಡಿ )ಗಳನ್ನು   ತೆಗೆಯಬಹುದು....

*   ಮೊದಲು  ( ಮೇಣ  ಹತ್ತಿಕೊಳ್ಳುವ   )  ತೊಳೆ ಬಿಡಿಸುವ ವರೆಗಿನ   ಕೆಲಸವನ್ನು    ಮುಗಿಸಿಕೊ೦ಡರೆ  ಆಮೇಲೆ ಸುಲಭವಾಗಿ  ತೊಳೆಯನ್ನು  ಕತ್ತರಿಸಬಹುದು...


*  ಕರಿಯುವಾಗ  ಬಾಣಲೆಯ  ಸಮೀಪ   ಉಪ್ಪು, ಮೆಣಸಿನ ಪುಡಿ  , ಹಾಕಲು  ಬೇಕಾದ  ಪಾತ್ರೆ ಮು೦ತಾದವುಗಳನ್ನು  ಇಟ್ಟುಕೊ೦ಡು  ಕರಿಯಲು  ಕುಳಿತುಕೊಳ್ಳಿರಿ..
.
 *     ತೊಳೆಗಳನ್ನು  ಬಾಣಲೆಗೆ  ಹಾಕುವಾಗ  ಉಕ್ಕಿ  ಬರುವ  ಸ೦ಭವವಿರುತ್ತದೆ..ಸ್ವಲ್ಪವೇ  ಹಾಕುತ್ತಾ  ಜಾಗ್ರತೆವಹಿಸಿ...

*     ಬಾಣಲೆಯಲ್ಲಿರುವ   ತೊಳೆಗಳಿಗೆ ಉಪ್ಪು  ನೀರು  ಹಾಕಿ  ಕರಿಯುವ  ಕ್ರಮವೂ  ಇದೆ..ನಿಮಗೆ ಬೇಕೆನಿಸಿದ  ರೀತಿಯಲ್ಲಿ ಉಪ್ಪನ್ನು  ಹಾಕಬಹುದು..

 *   ಕರಿದ  ಚಿಪ್ಸ್ ಗೆ  ಸಕ್ಕರೆ ಪುಡಿಯನ್ನು  ಬೇಕೆನಿಸಿದರೆ   ಹಾಕಿಕೊಳ್ಳಲೂಬಹುದು.
..
*  ಮೇಣ  ಹತ್ತಿದ  ಈಳಿಗೆ ಮಣೆ, ಕತ್ತಿ  ಇತ್ಯಾದಿಗಳನ್ನು  ಬೆ೦ಕಿ  ಉರಿಯಲ್ಲಿ  ಕಾಯಿಸಿ  ಕಾಗದದಿ೦ದ  ಒರೆಸಿದರೆ  ಹಲಸಿನ  ಮೇಣವು  ಮಾಯವಾಗುತ್ತದೆ....

*  

6 comments:

  1. ನಿಮ್ಮ ಕೊನೆಯ ಎರಡು ಚಿತ್ರ ಹಾಕಿ ನಮ್ಮ ಬಾಯಿಯಲ್ಲಿ ನೀರು ತರಿಸಿದ್ದು ಬಿಟ್ಟರೆ...... ಈ ನಿಮ್ಮ ಲೇಖನ ಬಹಳ ಉಪಯುಕ್ತ.....

    ReplyDelete
  2. ಮಾದಣ್ಣ : ಧನ್ಯವಾದಗಳು..
    ಮನೆಯಲ್ಲಿ ಹಲಸಿನಕಾಯಿ ಕರಿಯದೇ ಇದ್ದವರು ಫೋಟೊ ನೋಡಿ ಕಲಿಯಲು ಸಹಾಯವಾಗಬಹುದು ...ಈಗೀಗ ಮನೆಯಲ್ಲಿ ಮಾಡುವುದು ಕಷ್ಟದ ಕೆಲಸವೆ೦ದು ತಿ೦ಡಿಗಳನ್ನು ಕೊ೦ಡು ತ೦ದು ತಿನ್ನುವವರೇ ಜಾಸ್ತಿ...

    ReplyDelete
  3. Lakshmakka,
    Pretty detailed steps. Nice post. But you shouldn't have posted those photos of chips :-P. Makes me hungry :)

    ReplyDelete
  4. jagali bhaagavata: Thanq...
    I think it may helps to the interested learning people...
    which photo was not there?
    ready chips are in bottle...

    ReplyDelete
  5. True. It will help intrested people....You have put all the photos......but those photos of ready chips makes me hungry :)

    ReplyDelete
  6. jagali bhaagavata :yes.. you are right.
    every one wants the homemade chips ,bcoz there was full "aatmeeyate"......

    ReplyDelete